ಸೋಂಕು ಪ್ರಮಾಣ ಹೆಚ್ಚಳ * ಎಚ್ಚರಿಕೆ ವಹಿಸಲು ವೈದ್ಯರ ಸೂಚನೆ
ಬೇಸಿಗೆಯ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯವೇ ಅಕ್ಷರಶಃ ಕಾವೇರುತ್ತಿದೆ. ಬಿಸಿಲ ಬೇಗೆಯಲ್ಲಿ ಜನ ಬಸವಳಿಯುತ್ತಿರುವಂತೆ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭಗೊಳ್ಳಲು ದಿನಗಣನೆ ಆರಂಭಗೊಂಡಿದೆ. ಈ ನಡುವೆ, ಬಿಸಿಲ ತಾಪಮಾನದಿಂದಾಗಿ ಮಕ್ಕಳಲ್ಲಿ ನಾನಾ ಬಗೆಯ ಸೋಂಕು (ಇನ್‌ಫೆಕ್ಷನ್) ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಪೋಷಕರನ್ನು ಆತಂಕಕ್ಕೆ ಈಡು ಮಾಡುತ್ತಿದೆ.
ಬೇಸಿಗೆ ರಜೆಯನ್ನು ಮಕ್ಕಳು ಅತ್ಯುತ್ಸಾಹದಿಂದ ಅನುಭವಿಸುವ ಕಾರಣ ಬಿಸಿಲಿನ ಪ್ರಖರತೆಯನ್ನೂ ಲೆಕ್ಕಿಸದೆ ಓಡಾಡುತ್ತಾರೆ. ಇದರಿಂದ ನಾನಾ ಬಗೆಯ ಇನ್‌ಫೆಕ್ಷನ್‌ಗಳಿಗೆ ತುತ್ತಾಗುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದು, ಮುನ್ನಚ್ಚರಿಕೆ ವಹಿಸಲು ಸಲಹೆ ನೀಡುತ್ತಿದ್ದಾರೆ.
ನಾನಾ ಬಗೆಯ ಸೋಂಕು..:
ಕ್ಯಾಂಡಿಡಾ ಇನ್ಫೆಕ್ಷನ್, ಫಂಗಲ್ ಇನ್ಫೆಕ್ಷನ್, ವೈರಲ್ ಇನ್ಫೆಕ್ಷನ್, ಸ್ಕಿನ್ ಇನ್ಫೆಕ್ಷನ್, ಡೈಯೆರಿಯಾ, ನಿರ್ಜಲೀಕರಣ, ತಾಪಾಘಾತ, ಹಾಗೂ ಶಾಖದ ದದ್ದುಗಳು, ನಿತ್ರಾಣ, ಅಜೀರ್ಣ, ಚರ್ಮದಲ್ಲಿ ಅಲರ್ಜಿ ಹಾಗೂ ಅಜೀರ್ಣ, ಮಲಬದ್ಧತೆಯಂತಹ ಸಮಸ್ಯೆಗಳು ಈ ಬಿಸಿಲಿನ ಧಗೆಯಲ್ಲಿ ಮಕ್ಕಳನ್ನು ಕಾಡುವ ಸಾಧ್ಯತೆ ಇದೆ. ಕಳೆz ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಮಕ್ಕಳಲ್ಲಿ 15ರಿಂದ 20 ಶೇಕಡಾ ಮಕ್ಕಳಲ್ಲಿ ಫಂಗಲ್, ವೈರಲ್, ಸ್ಕಿನ್ ಇನ್ಫೆಕ್ಷನ್ ಜೊತೆಗೆ ಡೈಯೆರಿಯಾ ಶುರುವಾಗಿದೆ. ಹೀಗಾಗಿ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರು ಎಚ್ಚರಿಸಿದ್ದಾರೆ.
ಸೋಂಕು ಕಾಯಿಲೆಗಳು ಮಕ್ಕಳಲ್ಲಿ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತಿದೆ. ಮನೆಯಲ್ಲಿ ಒಂದು ಮಗುವಿಗೆ ಇನ್‌ಫೆಕ್ಷನ್ ಕಾಯಿಲೆ ಖಾಯಿಲೆ ಕಂಡು ಬಂದರೆ ವೇಗವಾಗಿ ಎಲ್ಲರಿಗೂ ಹರಡುತ್ತಿದೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಈ ಸಂದರ್ಭದಲ್ಲಿರುವ ಕಾರಣ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯವಿದೆ. ಈ ಹಂತದಲ್ಲಿ ಮಕ್ಕಳಿಗೆ ಕುದಿಸಿ ಆರಿಸಿದ ನೀರು ಕುಡಿಸಬೇಕು. ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಜಂಕ್‌ಫುಡ್ ಹಾಗೂ ಸಿಹಿ ಅಂಶಗಳಿರುವ ತಿನಿಸುಗಳ ಸೇವನೆ ಕಡಿಮೆ ಮಾಡಬೇಕು ಎನ್ನುತ್ತಿದ್ದಾರೆ ವೈದ್ಯರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಲಿನ ಪ್ರಖರತೆ ತೀವ್ರವಿದೆ. ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಎಚ್ಚರಿಕೆ ವಹಿಸಬೇಕಿದೆ. ಆದಷ್ಟು ಬೆಳಗ್ಗೆ ಮತ್ತು ಸಂಜೆ ವೇಳೆ ಮಾತ್ರ ಆಟವಾಡುವಂತೆ ಸೂಚನೆ ನೀಡಲಾಗಿದೆ. ದೇಹದ ಉಷ್ಣತೆಯು 40 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಗಂಭೀರ ಸಮಸ್ಯೆ ಎದುರಾಗುವ ಸಂಭವವಿದೆ. ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟ್ರೋಕ್ ಕೂಡ ಆಗುವ ಸಾಧ್ಯತೆ ಇದೆ. ಪೂರ್ವಾಹ್ನ 11ರಿಂದ ಸಂಜೆ 4 ಗಂಟೆಯವರೆಗೆ ಮಕ್ಕಳು ಬಿಸಿಲಿನಲ್ಲಿ ಆಟವಾಡದಂತೆ ಎಚ್ಚರಿಕೆ ವಹಿಸವುದು ಅಗತ್ಯ ಎನ್ನುತ್ತಾರೆ ವೈದ್ಯರು.
ಶೇಖರಿಸಿಟ್ಟ ಆಹಾರದ ಬಗ್ಗೆ ಎಚ್ಚರವಿರಲಿ
ಬೇಸಿಗೆಯಲ್ಲಿ ಶೇಖರಿಸಿಟ್ಟ ಆಹಾರ ಪದಾರ್ಥಗಳಲ್ಲಿ ಬಾಕ್ಟೀರಿಯಾ, ಶಿಲೀಂಧ್ರಗಳು ಸುಲಭದಲ್ಲಿ ಬೆಳೆದು ವಾಂತಿ-ಭೇದಿಗೆ ಕಾರಣವಾಗುತ್ತದೆ. ಈಬಗ್ಗೆ ಎಚ್ಚರ ವಹಿಸಬೇಕು. ಚರ್ಮದ ಹೊರ ಭಾಗಕ್ಕೆ ಬೆವರನ್ನು ಒಯ್ಯುವ ನಾಳಗಳು ಬ್ಲಾಕ್ ಆಗಿ ಲವಣಯುಕ್ತ ದ್ರವ ಚರ್ಮದಲ್ಲಿ ಇಂಗಿ ತುರಿಕೆ ಉಂಟು ಮಾಡುತ್ತದೆ. ನೀರಿನ ಅಂಶವಿರುವ ಹಣ್ಣುಗಳನ್ನು ಸೇವಿಸಬೇಕು.
-ಡಾ. ಶಿಶಿರಾ, ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ನೆಲ್ಯಾಡಿ
ನೀರು ಧಾರಾಳ ಕುಡಿಯಿರಿ
ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಇದರಿಂದ ಹಲವಾರು ಕಾಯಿಲೆಗಳು ಬರುತ್ತವೆ. ವಾಂತಿಭೇದಿ, ಮೂತ್ರದಲ್ಲಿ ಕಲ್ಲು, ಉರಿಮೂತ್ರ, ಡೆಂಗೆ, ಮಲೇರಿಯಾ ಕಾಯಿಲೆ ಬರುವ ಸಾಧ್ಯತೆ ಇದೆ. ದೇಹದಲ್ಲಿ ನೀರಿನ ಅಂಶ ಕಮ್ಮಿಯಾಗದಂತೆ ನೋಡಿಕೊಳ್ಳಬೇಕು.
-ಡಾ.ಮುರಳೀಧರ ವೈ.ಕೆ., ಆಡಳಿತ ನಿರ್ದೇಶಕರು, ಅಶ್ವಿನಿ ಹಾಸ್ಪಿಟಲ್, ನೆಲ್ಯಾಡಿ
ಹಣ್ಣುಗಳನ್ನು ತೊಳೆದು ತಿನ್ನಿ..
ಬೇಸಿಗೆಯಲ್ಲಿ ಮಕ್ಕಳಲ್ಲಿ ನಿರ್ಜಲೀಕರಣ, ಚರ್ಮದ ಸಮಸ್ಯೆಗಳು, ಧೂಳಿನಿಂದಾಗಿ ಅಲರ್ಜಿ, ಸಾಂಕ್ರಾಮಿಕ ರೋಗಗಳು, ಕಣ್ಣಿನ ಸಮಸ್ಯೆಗಳು, ವೈರಲ್ ಸೋಂಕುಗಳು, ಉರಿಮೂತ್ರ, ಟೈಫಾಯ್ಡ್ ಇತ್ಯಾದಿ ಜ್ವರ ಬರುವ ಸಾಧ್ಯತೆಗಳಿವೆ. ಮಧ್ಯಾಹ್ನದ ಸಮಯದಲ್ಲಿ ಅನಗತ್ಯವಾಗಿ ಮಕ್ಕಳನ್ನು ಹೊರಗೆ ಬಿಡಬೇಡಿ. ಶುದ್ಧವಾದ ನೀರು ಕುಡಿಯಿರಿ, ಹಣ್ಣುಗಳನ್ನು ತೊಳೆದು ತಿನ್ನಿ. ತಾಮಸ ಆಹಾರಗಳು ಬೇಡ. ಯೋಗ, ಧ್ಯಾನ ಮಾಡಿ.
-ಡಾ.ಅನೀಶ್ ಕುಮಾರ್ ಸಾದಂಗಾಯ. ಹೋಮಿಯೋಪತಿ ವೈದ್ಯರು. ನೆಲ್ಯಾಡಿ.