ನೆಲ್ಯಾಡಿ ಗ್ರಂಥಾಲಯಕ್ಕೆ ಡಿಜಿಟಲ್ ಟಚ್

ಶೇರ್ ಮಾಡಿ

ನೆಲ್ಯಾಡಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಡಿಜಿಟಲೀಕರಣಗೊಂಡಿದ್ದು ಕಂಪ್ಯೂಟರ್, ಲ್ಯಾಪ್‌ಟಾಪ್, ಪ್ರಿಂಟರ್ ಸೌಲಭ್ಯ ಒದಗಿಸಲಾಗಿದೆ. ಸಣ್ಣ ಮಕ್ಕಳಿಗೆ ಕುಳಿತು ಓದಲು ಅನುಕೂಲವಾಗುವಂತೆ ಬೇಬಿ ಚಯರ್, ರೌಂಡ್ ಟೇಬಲ್ ಸಹ ಬಂದಿದೆ. ಈ ಮೂಲಕ ಮಕ್ಕಳು ಗ್ರಂಥಾಲಯದ ಕಡೆಗೆ ಆಕರ್ಷಿತರಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದ ಜನರಲ್ಲಿ ಮೊಬೈಲ್‌ನಿಂದಾಗಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಬಿಡುವಿನ ಸಮಯವನ್ನೂ ಮೊಬೈಲ್‌ನೊಂದಿಗೆ ಕಳೆಯುವ ಸಾಕಷ್ಟು ಮಂದಿ ಇದ್ದಾರೆ. ಮೊಬೈಲ್ ಗೀಳು ಕಡಿಮೆ ಮಾಡಿಕೊಂಡು ಪುಸ್ತಕ ಓದುವ ಕಡೆಗೆ ಆಕರ್ಷಿತರಾದಲ್ಲಿ ಜ್ಞಾನ ಸಂಪಾದನೆಯೂ ಮಾಡಬಹುದಾಗಿದೆ. ವಿದ್ಯಾರ್ಥಿಗಳು, ಯುವ ಸಮುದಾಯವನ್ನು ಗ್ರಂಥಾಲಯದ ಕಡೆಗೆ ಆಕರ್ಷಿತರಾಗುವಂತೆ ಮಾಡಲು ಗ್ರಂಥಾಲಯಗಳನ್ನೂ ಡಿಜಿಟಲೀಕರಣ ಮಾಡಲಾಗುತ್ತಿದೆ. ಇದೀಗ ನೆಲ್ಯಾಡಿಯ ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ಇದೀಗ ಡಿಜಿಟಲೀಕರಣ ಮಾಡಲಾಗಿದ್ದು ಕಂಪ್ಯೂಟರ್, ಲ್ಯಾಪ್‌ಟಾಪ್, ಕಲರ್‌ಪ್ರಿಂಟರ್ ಸೇರಿದಂತೆ ಹಲವು ಸವಲತ್ತು ಒದಗಿಸಲಾಗಿದೆ.
ಕಡಬ ತಾಲೂಕು ಪಂಚಾಯಿತಿಯ 2023-24ನೇ ಸಾಲಿನ ಅನಿರ್ಬಂಧಿತ ಅನುದಾನದಲ್ಲಿ ಗ್ರಾಮ ಪಂಚಾಯಿತಿಯ ಡಿಜಿಟಲೀಕರಣಕ್ಕೆ ಬೇಕಾದ ಸೌಲಭ್ಯ ಒದಗಿಸಲಾಗಿದೆ. ಲ್ಯಾಪ್‌ಟ್ಯಾಪ್, ಕಂಪ್ಯೂಟರ್, ಕಲರ್‌ಪ್ರಿಂಟರ್ ಹಾಗೂ ಇದಕ್ಕೆ ಬೇಕಾದ ಚಯರ್, ಟೇಬಲ್, ಯುಪಿಎಸ್ ಸೌಲಭ್ಯ ಒದಗಿಸಲಾಗಿದೆ. ಪುಸ್ತಕ, ದಿನಪತ್ರಿಕೆ ಓದುವುದರೊಂದಿಗೆ ಓದುಗರು ಕಂಪ್ಯೂಟರ್ ಬಳಕೆಗೂ ಅವಕಾಶವಿದೆ. ಇದರೊಂದಿಗೆ 5 ಅಡಿಯ ಮ್ಯಾಗಜಿನ್ ಸ್ಟ್ಯಾಂಡ್, ನ್ಯೂಸ್ ಪೇಪರ್ ರೀಡಿಂಗ್ ಟೇಬಲ್ ಸಹ ಬರಲಿದೆ. ಓದುಗರನ್ನು ಗ್ರಂಥಾಲಯದ ಕಡೆಗೆ ಆಕರ್ಷಿತರಾಗುವಂತೆ ಪ್ರಯತ್ನಿಸಲಾಗುತ್ತಿದೆ.

ಬೇಬಿ ಚಯರ್:
ಸಣ್ಣ ಮಕ್ಕಳಿಗೆ ಕುಳಿತು ಓದಲು ಅನುಕೂಲವಾಗುವಂತೆ ಸುಮಾರು 20 ಬೇಬಿ ಚಯರ್, ಎರಡು ಬೇಬಿ ರೌಂಡ್ ಟೇಬಲ್ ಸಹ ಹಾಕಲಾಗಿದೆ. ಇದು ಮಕ್ಕಳಿಗೆ ಖುಷಿ ಕೊಡಲಿದೆ. ಗ್ರಂಥಾಲಯದ ಡಿಜಿಟಲೀಕರಣಕ್ಕೆ ತಾಲೂಕು ಪಂಚಾಯಿತಿಯ 2023-24ನೇ ಸಾಲಿನ ಅನಿರ್ಬಂಧಿತ ಅನುದಾನದಲ್ಲಿ ಸುಮಾರು 2,30,706 ರೂ.ಬಳಕೆ ಮಾಡಲಾಗಿದೆ.

ಗ್ರಂಥಾಲಯದ ಸಮಯ:
ನೆಲ್ಯಾಡಿ ಗ್ರಂಥಾಲಯವು ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 3ರಿಂದ ಸಂಜೆ 7 ಗಂಟೆ ತನಕ ತೆರೆದಿರುತ್ತದೆ. ಅದೇ ರೀತಿ ಶನಿವಾರ ಮತ್ತು ಆದಿತ್ಯವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2ರಿಂದ ಸಂಜೆ 6ರ ತನಕ ತೆರೆದಿರುತ್ತದೆ. ಸೋಮವಾರ ಹಾಗೂ 2ನೇ ಮತ್ತು 4ನೇ ಮಂಗಳವಾರ ರಜಾ ದಿನ ಆಗಿರುತ್ತದೆ. ವಿದ್ಯಾರ್ಥಿಗಳು, ಓದುಗರು ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

2 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ:
ನೆಲ್ಯಾಡಿ ಗ್ರಾಮ ಪಂಚಾಯಿತಿ ಸುಸಜ್ಜಿತವಾದ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಈ ಕಟ್ಟಡ ಎಲ್ಲಾ ಸೌಲಭ್ಯವನ್ನೂ ಹೊಂದಿದೆ. ಎಲ್ಲಾ ದಿನಪತ್ರಿಕೆಗಳೂ ಇವೆ. ಅಲ್ಲದೇ ಕಾದಂಬರಿ ಸೇರಿದಂತೆ 2 ಸಾವಿರಕ್ಕೂ ಮಿಕ್ಕಿ ಕನ್ನಡ ಪುಸ್ತಕಗಳಿವೆ. ವಿದ್ಯಾರ್ಥಿಗಳಿಗೆ ತಮ್ಮ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳಿವೆ. ಇಷ್ಟೆಲ್ಲಾ ವ್ಯವಸ್ಥೆಗಳಿದ್ದರೂ ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆ ತೀರಾ ಕಡಿಮೆ ಇದೆ. ಸರಕಾರ ಲಕ್ಷಾಂತರ ರೂ.ಖರ್ಚು ಮಾಡಿ ಗ್ರಂಥಾಲಯ ಆಧುನೀಕರಣ ಮಾಡಿದೆ. ಓದುಗರು ಇದರ ಸದುಪಯೋಗ ಮಾಡಿಕೊಳ್ಳಬೇಕಾಗಿದೆ.

ನೆಲ್ಯಾಡಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಡಿಜಿಟಲೀಕರಣಕಗೊಂಡಿದ್ದು ಕಂಪ್ಯೂಟರ್, ಲ್ಯಾಪ್‌ಟ್ಯಾಪ್ ಸೌಲಭ್ಯ ಬಂದಿದೆ. ಸಣ್ಣ ಮಕ್ಕಳಿಗೆ ಅನುಕೂಲವಾಗುವಂತೆ ಬೇಬಿ ಚಯರ್, ಬೇಬಿ ಟೇಬಲ್ ಸಹ ಬಂದಿದೆ. ಇಲ್ಲಿ ಸಾವಿರಾರು ಪುಸ್ತಕಗಳಿವೆ. ಪ್ರಮುಖ ಎಲ್ಲಾ ದಿನಪತ್ರಿಕೆಗಳು ಓದುಗರಿಗೆ ಲಭ್ಯವಿದೆ. ಸ್ಥಳೀಯ ಶಾಲೆಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮಕ್ಕಳನ್ನು ಕಳಿಸುವಂತೆ ಕೇಳಿಕೊಂಡಿದ್ದೇವೆ. ಸಾರ್ವಜನಿಕರೂ ಇವೆಲ್ಲದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
-ಮನೀಷಾ,ಗ್ರಂಥಾಲಯ ಮೇಲ್ವಿಚಾರಕಿ,ನೆಲ್ಯಾಡಿ

Leave a Reply

error: Content is protected !!