ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ. ತಾಯಿಯು ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.
ಮೃತ ಮಹಿಳೆಯನ್ನು ನಾಗರಾಜ್ ಎಂಬವರ ಪತ್ನಿ ಚೈತ್ರಾ(30) ಎಂದು ಗುರುತಿಸಲಾಗಿದೆ. ಅಡ್ಯಾರ್ ನಿವಾಸಿಯಾಗಿರುವ ಇವರು ತನ್ನ ಒಂದು ವರ್ಷದ ಮಗು ದಿಯಾಂಶ್ ಜತೆ ಮಧ್ಯಾಹ್ನ ಸೇತುವೆಯ ಮೂಲಕ ನಡೆದುಕೊಂಡು ಬಂದು ಹರೇಕಳ ಕಡವಿನಬಳಿ ಬಂದಿದ್ದರು ಎನ್ನಲಾಗಿದೆ. ನದಿಯ ಸಮೀಪ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ಗಮನಿಸಿದ್ದರು. ಆದರೆ ಮಧ್ಯಾಹ್ನ ಬಳಿಕ ಆಕೆಯ ಮನೆಯವರು ಬಂದು ವಿಚಾರಿಸಿದ್ದು, ಆ ಬಳಿಕ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ತಿಳಿದಿತ್ತು. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ರಾತ್ರಿ 8.30 ರ ವೇಳೆಗೆ ಹರೇಕಳ ನೇತ್ರಾವತಿ ನದಿಯಲ್ಲಿ ತಾಯಿ ಮಗುವಿನ ಶವ ಪತ್ತೆಯಾಗಿದೆ. ಮಹಿಳೆಯು ಮಗುವಿನೊಂದಿಗೆ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.
ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿದ್ದರು!
ದಿಯಾಂಶ್ ಒಂದು ವರ್ಷದ ಹುಟ್ಟುಹಬ್ಬವನ್ನು ಆಶ್ರಮವೊಂದರಲ್ಲಿ ನಿನ್ನೆಯಷ್ಟೇ ಆಚರಿಸಿದ್ದರೆಂಬ ಮಾಹಿತಿಯಿದೆ. ಆದರ್ಶಯುತವಾಗಿ ಮಗುವಿನ ಹುಟ್ಟುಹಬ್ಬ ಆಚರಿಸಿ ಇಂದು ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿರುವುದರ ಕುರಿತು ಸಾರ್ವಜನಿಕ ವಲಯದಲ್ಲಿ ಸಂಶಯಗಳು ವ್ಯಕ್ತವಾಗಿದೆ.