ಬಿಸಿಲಿನ ಕಾವು: ನೆಲ್ಯಾಡಿ ವಾರದ ಸಂತೆ ಡಲ್

ಶೇರ್ ಮಾಡಿ

ದಿನದಿಂದ ದಿನಕ್ಕೆ ಬಿಸಿಲಿನ ತಾಪ ವಿಪರೀತ ಏರುತ್ತಿದ್ದು, ನೆಲ್ಯಾಡಿ ವಾರದ ಸಂತೆ ಮೇಲೆ ತೀವ್ರ ಹೊಡೆತ ಬಿದ್ದಿದೆ. ವ್ಯಾಪಾರಿಗಳು ಗ್ರಾಹಕರೂ ಇಲ್ಲದೆ, ವ್ಯಾಪಾರವೂ ಆಗದೆ ತಲೆ ಮೇಲೆ ಕೈಯಿಟ್ಟು ಕುಳಿತಿದ್ದಾರೆ.

ಬೆಳಗಿನಿಂದಲೇ ಸೂರ್ಯನ ಪ್ರಖರತೆ ಏರುತ್ತಾ, ಮಧ್ಯಾಹ್ನದ ವೇಳೆಗೆ ವಿಪರೀತಗೊಳ್ಳುತ್ತದೆ. ಮಾರ್ಚ್ ನಿಂದ ಆರಂಭವಾದ ಬಿರುಬಿಸಿಲು ಮುಂದುವರಿದಿದ್ದು ಸುಮಾರು 39 ರಿಂದ 40 ಡಿಗ್ರಿ ತಾಪಮಾನಕ್ಕೆ ಬಂದು ತಲುಪಿದೆ. ಇದರಿಂದ ಜನಸಾಮಾನ್ಯರು ಮನೆ ಬಿಟ್ಟು ಹೊರಬರಲು ಹಿಂಜರಿಯುತ್ತಿದ್ದಾರೆ. ಪರಿಣಾಮ ವ್ಯಾಪಾರಿಗಳು ವ್ಯಾಪಾರವಿಲ್ಲದೆ ನಷ್ಟದ ಹಾದಿ ಹಿಡಿಯುವಂತಾಗಿದೆ.

ಪ್ರತಿ ಬುಧವಾರ ನಡೆಯುತ್ತಿದ್ದ ನೆಲ್ಯಾಡಿ ವಾರದ ಸಂತೆ ಕಳೆದ ಕೆಲವು ವಾರಗಳಿಂದ ಡೆಲ್ ಹೊಡೆಯುತ್ತಿದೆ. ನೆಲ್ಯಾಡಿ, ಕೌಕ್ರಾಡಿ, ಗೋಳಿತೊಟ್ಟು, ಕೊಕ್ಕಡ ಗ್ರಾಮದ ರೈತಾಪಿ ಜನರು ತಾವು ಬೆಳೆದ ಬೆಳೆ ಮಾರಾಟ ಮಾಡಲು ಹಾಗೂ ಕೊಂಡುಕೊಳ್ಳಲು ಈ ವಾರದ ಸಂತೆಯನ್ನೇ ಆಶ್ರಯಿಸಿದ್ದರು. ಆದರೆ ಬಿಸಿಲಿನ ಕಾರಣಕ್ಕೆ ವಾರದ ಸಂತೆ ಬೇಕು ಎನ್ನುತ್ತಿದೆ. ವ್ಯಾಪಾರಿಗಳು ಮಾರುಕಟ್ಟೆಗೆ ತಂದಿದ್ದ ತರಕಾರಿ ಇನ್ನಿತರ ಹಸಿರು ಕಾಯಿಪಲ್ಲೆಗಳು ವ್ಯಾಪಾರವಾಗದೆ ನಷ್ಟ ಅನುಭವಿಸುವಂತಾಗಿದೆ.

ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ:
ಬೇಸಿಗೆ ಹಿನ್ನೆಲೆಯಲ್ಲಿ ತರಕಾರಿ ಪೂರೈಕೆ ಕಡಿಮೆಯಾಗಿದ್ದು, ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರಿಂದ ಗ್ರಾಹಕರಿಗೆ ತರಕಾರಿ ಖರೀದಿಯ ಬಿಸಿ ತಟ್ಟಿದೆ. ನಿತ್ಯ ಬಳಕೆಗೆ ಬೇಕಾದ ತರಕಾರಿ ಏರುಗತಿಯಿಂದಾಗಿ ಖರೀದಿಸಲು ಸಹ ಹಿಂದೇಟು ಹಾಕುವಂತಾಗಿದೆ.

ರಂಜಾನ್ ಎಫೆಕ್ಟ್
ರಂಜಾನ್ ಹಬ್ಬ ಸಮೀತಿಸುತ್ತಿರುವುದರಿಂದ ಹೊರ ರಾಜ್ಯಗಳಿಗೆ ತರಕಾರಿ ಬೇಡಿಕೆ ಹೆಚ್ಚಾಗಿರುವುದರಿಂದಲೂ ದರ ಅಧಿಕವಾಗಿದೆ. ರಂಜಾನ್ ನಲ್ಲಿ ಮುಸ್ಲಿಂ ಸಮುದಾಯ ಉಪವಾಸ ವ್ರತ ಆಚರಿಸುವುದರಿಂದ ಉಪವಾಸ ಬಿಡುವ ಸಂಜೆ ವೇಳೆ ಹಣ್ಣು ತರಕಾರಿ ಹೆಚ್ಚು ಬಳಸುತ್ತಾರೆ. ಇದರಿಂದ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆಯಾಗುತ್ತಿರುವುದು ಮತ್ತೊಂದು ಕಾರಣ ಎನ್ನಲಾಗುತ್ತಿದೆ

ಗ್ರಾಹಕರ ಸಂಖ್ಯೆ ವಿರಳವಾಗಿದೆ, ತರಕಾರಿ ಉತ್ಪನ್ನಗಳ ಪೂರೈಕೆ ಕಡಿಮೆಯಾಗಿದೆ, ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವ್ಯಾಪಾರ ನಷ್ಟದ ಹಾದಿ ಹಿಡಿದಿದೆ
                                                                         – ಅಬ್ದುಲ್ ಲತೀಫ್, ಗೋಳಿತೊಟ್ಟು ವ್ಯಾಪಾರಸ್ಥರು.

ಕಳೆದ 25 ವರುಷಗಳಿಂದ ನೆಲ್ಯಾಡಿ ವಾರದ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದು, ವಿಪರೀತ ಬಿಸಿಲಿನಿಂದಾಗಿ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವುದು ಇದೇ ಮೊದಲು.
                                                                       – ಜಮಿಲ್ ಪಾಷಾ, ಸಂತೆ ತರಕಾರಿ ವ್ಯಾಪಾರಸ್ಥರು

ವ್ಯಾಪಾರದಲ್ಲಿ ಶೇ.50ರಷ್ಟು ನಷ್ಟವಾಗಿದೆ.ತರಕಾರಿ ಬಿಸಿಲಿನ ತಾಪಕ್ಕೆ ಹಾಳಾಗುತ್ತಿದ್ದು, ವ್ಯಾಪಾರದಲ್ಲಿ ನಷ್ಟವಾಗುತ್ತಿದೆ.
                                                                    -ಎ.ಎಂ.ಮಹಮ್ಮದ್ ಮುಸ್ತಫಾ ಹೊಸಮಜಲು, ಸಂತೆ ತರಕಾರಿ ವ್ಯಾಪಾರಸ್ಥರು

    Leave a Reply

    error: Content is protected !!