ತೋಟಕ್ಕೆ ಕಾಡುಪ್ರಾಣಿಗಳ ಹಾವಳಿ, ಕೃಷಿಕರಿಂದ 112ಕ್ಕೆ ಕರೆ!

ಶೇರ್ ಮಾಡಿ

ಚುನಾವಣೆ ಹಿನ್ನೆಲೆಯಲ್ಲಿ ಕೋವಿಗಳನ್ನು ಪೊಲೀಸ್‌ ಠಾಣೆಗಳಲ್ಲಿ ಠೇವಣಿ ಇಟ್ಟಿರುವುದರಿಂದ ಬೆಳೆ ರಕ್ಷಣೆಗಾಗಿ ಕೃಷಿಕರು ಈಗ ಬೇರೆ ದಾರಿ ಇಲ್ಲದೆ ಪೊಲೀಸರ ಹಾಗೂ ಕೋರ್ಟ್‌ ಮೊರೆ ಹೋಗುತ್ತಿದ್ದಾರೆ. ವಿನಾಯಿತಿ ನೀಡುವಂತೆ ಮಾಡಿರುವ ಮನವಿಗೆ ಬೆಲೆ ಸಿಗದ ಕಾರಣ ಕಾಡು ಪ್ರಾಣಿಗಳು ತೋಟಕ್ಕೆ ಬಂದಾಕ್ಷಣ 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಲಾರಂಭಿಸಿದ್ದಾರೆ.

ಕಾಡುಪ್ರಾಣಿಗಳಿಂದ ಬೆಳೆ, ಸ್ವರಕ್ಷಣೆ ಗಾಗಿ ನಾವು ಹೊಂದಿರುವ ಕೋವಿಗಳನ್ನು ಪೊಲೀಸರು ಠೇವಣಿ ಇರಿಸಿ ಕೊಂಡಿರುವುದರಿಂದ ಈಗ ಪೊಲೀಸರೇ ನಮಗೆ ರಕ್ಷಣೆ ಒದಗಿಸ ಬೇಕು ಎಂಬುದು ಕೃಷಿಕರ ವಾದ. ಈ ನಿಟ್ಟಿನಲ್ಲಿ ಪುತ್ತೂರು ಭಾಗದ ಕೃಷಿಕರು ಈಗಾಗಲೇ ಅಭಿಯಾನ ಆರಂಭಿಸಿದ್ದಾರೆ. ಜತೆಗೆ ಈಗಾಗಲೇ ಹಲವಾರು ಕರೆಗಳು ಪೊಲೀಸರ ಸಹಾಯವಾಣಿಗೆ ಹೋಗಿವೆ.

ತೋಟದಲ್ಲಿ ಈಗ ಕೋತಿ, ಹಂದಿ ಮತ್ತಿತರ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ.ರಕ್ಷಣೆಗೆ ಕೋವಿ ನಮ್ಮಲ್ಲಿಲ್ಲ. ಹೀಗಾಗಿ ಪೊಲೀಸರೇ ಬಂದು ಬೆಳೆ ರಕ್ಷಣೆ ಮಾಡಬೇಕು ಎಂಬುದು ಕೃಷಿಕರ ಆಗ್ರಹ. ತುರ್ತು ಸೇವೆ 112ಕ್ಕೆ ಕರೆ ಮಾಡುವ ಚಳವಳಿಯನ್ನು ಪರವಾನಗಿ ಹೊಂದಿದ ಎಲ್ಲ ಕೃಷಿಕರೂ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ಹಸುರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಕರೆ ನೀಡಿದೆ. ದ.ಕ. ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕಿಂತಲೂ ಅಧಿಕ ಕೃಷಿಕರು ಕೋವಿ ಪರವಾನಿಗೆ ಹೊಂದಿದ್ದಾರೆ.

ಚುನಾವಣೆ ಸಂದರ್ಭ ಮೂರು ತಿಂಗಳು ಎಲ್ಲರೂ ಕೋವಿಗಳನ್ನು ಪೊಲೀಸ್‌ ಠಾಣೆಗಳಲ್ಲಿ ಠೇವಣಿ ಇಡಬೇಕೆಂಬುದು ಜಿಲ್ಲಾಡಳಿತದ ಸೂಚನೆ. ಕಾಡು ಪ್ರಾಣಿಗಳು ತೋಟಕ್ಕೆ ನುಗ್ಗಿ ಹಾನಿ ಮಾಡಿದಾಗ ಅವುಗಳನ್ನು ಓಡಿಸಲು ಕೋವಿ ಇಲ್ಲದೆ ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿದ್ದರೂ ಕೈಕಟ್ಟಿಕುಳಿತುಕೊಳ್ಳುವ ಸ್ಥಿತಿ. ರೈತರಿಗೆ ವಿನಾಯಿತಿ ನೀಡಬೇಕೆಂದು ಎಷ್ಟೇ ಮನವಿ ಮಾಡಿದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ.

ಕೋವಿ ಠೇವಣಿಯಿಂದ ವಿನಾಯಿತಿ ಕೋರಿ ಎ.1ರಂದು ಕೃಷಿಕರು ನ್ಯಾಯಾಲಯ ದಲ್ಲಿ ದಾವೆ ಹೂಡಿದ್ದಾರೆ. ಎ.2ರಂದು ವಿನಾಯಿತಿ ನೀಡಿರುವ ಮಾಹಿತಿಯನ್ನು ದ.ಕ. ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಎ.3 ರಂದು ಕೋವಿಯನ್ನು ತತ್‌ಕ್ಷಣ ಹಿಂದಿ ರುಗಿಸಬೇಕೆಂದು ನ್ಯಾಯಾಲಯವು ಆದೇಶಿಸಿತ್ತು. ಆದರೆ ಪೊಲೀಸರು ಕೋವಿಯನ್ನು ಹಿಂದಿರುಗಿಸಿರಲಿಲ್ಲ. ಬಳಿಕ ಈ ಕೃಷಿಕರು 112ಕ್ಕೆ ಕರೆ ಮಾಡಿ ನ್ಯಾಯಾಲಯದ ಆದೇಶ, ಜಿಲ್ಲಾಧಿಕಾರಿಯ ಸೂಚನೆ ಇದ್ದರೂ ಕೋವಿ ಹಿಂದಿರುಗಿಸಿಲ್ಲ. ಹೀಗಾಗಿ ತೋಟಕ್ಕೆ ಬಂದಿರುವ ಕೋತಿಗಳನ್ನು ಪೊಲೀಸರೇ ಓಡಿಸಬೇಕು ಎಂದು ಹೇಳಿದ್ದರು.

ಪೊಲೀಸರೇ ಕೋವಿ ಮನೆಗೆ ತಲುಪಿಸಿದರು!
ಈ ನಡುವೆ ಪೊಲೀಸ್‌ ಠಾಣೆಯಲ್ಲಿ ಠೇವಣಿ ಇರಿಸಲಾಗಿದ್ದ ಕೋವಿಯನ್ನು ಪೊಲೀಸರೇ ಕೃಷಿಕರೊಬ್ಬರ ಮನೆಗೆ ತಲುಪಿಸಬೇಕಾಗಿ ಬಂದ ಘಟನೆಯೂ ನಡೆದಿದೆ. ನ್ಯಾಯಾಲಯಕ್ಕೆ ಹೋಗಿ ತನಗೆ ಕೋವಿಯ ಅನಿವಾರ್ಯವನ್ನು ಮನವರಿಕೆ ಮಾಡಿ ಅನುಮತಿ ಪಡೆದ ವ್ಯಕ್ತಿಯೊಬ್ಬರಿಗೆ ಪೊಲೀಸರೇ ಕೋವಿಯನ್ನು ಮನೆಗೆ ತಲುಪಿಸಿದ್ದಾರೆ. ಕೋವಿಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಬಾರದು ಎಂಬ ಷರತ್ತನ್ನು ಕೋವಿ ಠೇವಣಿಯಿಂದ ಕೃಷಿಕರಿಗೆ ವಿನಾಯಿತಿ ನೀಡುವ ನಿಯಮದಲ್ಲಿ ನಮೂದಿಸಿರುವುದೇ ಇದಕ್ಕೆ ಕಾರಣ. ನಾವು ಠಾಣೆಗೆ ಹೋಗಿ ಕೋವಿ ಪಡೆದು ಮನೆಗೆ ಒಯ್ಯುವಾಗ ಅದನ್ನೇ ಸಾರ್ವಜನಿಕ ಪ್ರದರ್ಶನ ಎಂದು ನಿರ್ಣಯಿಸಿ ಕೇಸು ದಾಖಲಿಸಿ ಕೊಂಡರೆ ಏನು ಮಾಡುವುದು ಎಂಬ ಪ್ರಶ್ನೆ ಕೃಷಿಕರದು. ಇದಕ್ಕಾಗಿ ಖುದ್ದು ಪೊಲೀಸರೇ ಕೋವಿಯನ್ನು ತಂದು ಒಪ್ಪಿಸಬೇಕೆಂಬ ಷರತ್ತನ್ನು ಕೃಷಿಕರು ವಿಧಿ. ವಿಟ್ಲ ಠಾಣಾ ವ್ಯಾಪ್ತಿಯ ಕೃಷಿಕರೊಬ್ಬರ ಈ ಷರತ್ತಿಗೆ ಕೊನೆಗೂ ಪೊಲೀಸ್‌ ಇಲಾಖೆ ಒಪ್ಪಿದ್ದು, ಮನೆಗೆ ಹೋಗಿ ಕೋವಿ ಹಸ್ತಾಂತರಿಸಿ ಬಂದಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 9 ಮಂದಿ ಕೃಷಿಕರು ನ್ಯಾಯಾಲಯದ ಮೊರೆ ಹೋಗಿದ್ದು, ಅವರಿಗೆ ಅನುಮತಿ ದೊರಕಿದೆ. 7 ಮಂದಿ ಕೃಷಿಕರು ಠಾಣೆಯಿಂದ ಕೋವಿ ವಾಪಸ್‌ ಕೊಂಡೊಯ್ದಿದ್ದು, ಓರ್ವರು ಠೇವಣಿ ಇಟ್ಟಿರಲಿಲ್ಲ. ಮತ್ತೋರ್ವ ಕೃಷಿಕರ ಒತ್ತಾಯದಂತೆ ಪೊಲೀಸರೇ ಕೋವಿಯನ್ನು ಮನೆಗೆ ತಲುಪಿಸಿದ್ದಾರೆ.

ವೈರಲ್‌ ಆದ ಆಡಿಯೋ
ವಿಟ್ಲದ ಕೃಷಿಕರೊಬ್ಬರು 112 ಸಹಾಯವಾಣಿಗೆ ಕರೆ ಮಾಡಿ, ತೋಟಕ್ಕೆ ಮಂಗ ಬಂದಿದೆ. ಕೂಡಲೇ ಬರಬೇಕು ಎಂದು ಮನವಿ ಮಾಡಿದ್ದರು. ಆ ಆಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಂಜೆ 5 ಗಂಟೆಯ ವೇಳೆಗೆ ಅವರು ಫೋನ್‌ ಮಾಡಿದ್ದು, 8 ಗಂಟೆಯ ವೇಳೆಗೆ ವಿಟ್ಲ ಪೊಲೀಸರು ಅವರ ಮನೆಗೆ ಭೇಟಿ ನೀಡಿದ್ದಾರೆ. ಮರುದಿನ ಬೆಳಗ್ಗೆ ಅವರ ಕೋವಿಯನ್ನೂ ಮರಳಿಸಲಾಗಿದೆ.

Leave a Reply

error: Content is protected !!