ನೆಲ್ಯಾಡಿ: ದೇಶೀಯ ಅಡಿಕೆ ಬೆಳೆಯನ್ನು ಬಿಟ್ಟು, ಹೊರದೇಶದಿಂದ ಅಡಿಕೆ ಆಮದು ಮಾಡಿಕೊಂಡಿರುವ ಕೇಂದ್ರ ಸರ್ಕಾರ, ಸ್ಥಳೀಯ ಬೆಳೆಗಾರರನ್ನು ನಿರ್ಲಕ್ಷಿಸಿದೆ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೆಲ್ಯಾಡಿಯಲ್ಲಿ ಗುರುವಾರ ನಡೆದ ಬಹಿರಂಗ ಚುನಾವಣಾ ಸಭೆಯಲ್ಲಿ ಮಾತನಾಡಿದರು.
ಅಡಿಕೆ ಸಮಸ್ಯೆ, ಹೆದ್ದಾರಿ ಕಾಮಗಾರಿ ಸೇರಿದಂತೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಆಗಬೇಕಿದೆ. ಸಂಸತ್ ಸದಸ್ಯನಾಗಿ ಆಯ್ಕೆಯಾದ ಮೇಲೆ ತಿಂಗಳಿಗೊಂದು ದಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ, ಎಲ್ಲರ ಸಹಕಾರ ಪಡೆದುಕೊಂಡು ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಈ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿರುವುದು ಕಾಂಗ್ರೆಸಿನ ಸಾಧನೆ. ಕಾಂಗ್ರೆಸ್ ಎಂಪಿಗಳು ಒಬ್ಬೊಬ್ಬರು ಒಂದೊಂದು ರೀತಿಯ ಕೊಡುಗೆ ನೀಡಿದ್ದಾರೆ. ನಂತರದ ಬಿಜೆಪಿ ಎಂಪಿಗಳು ಹೇಳಿಕೊಳ್ಳುವಂತಹ ಸಾಧನೆ ಏನೂ ಇಲ್ಲ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಗೆದ್ದರೆ ಅಭಿವೃದ್ಧಿ ಕೆಲಸಗಳು ಮತ್ತೆ ಆರಂಭಗೊಳ್ಳಲಿವೆ. ಬಡವರ ಪರವಾಗಿ ಸದಾ ಆಲೋಚಿಸುವ ಪದ್ಮರಾಜ್ ಆರ್. ಪೂಜಾರಿ ಅವರು ಹೊಸ ಶಕೆಗೆ ಮುನ್ನುಡಿ ಬರೆಯಲಿದ್ದಾರೆ ಎಂದರು.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ವೆಂಕಪ್ಪ ಗೌಡ ಮಾತನಾಡಿದರು, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಯಪ್ರಕಾಶ್, ಕಿರಣ್ ಬುಡ್ಲೆಗುತ್ತು, ಕೃಷ್ಣಪ್ಪ, ಉಷಾ ಅಂಚನ್, ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಸೊರಕೆ, ಪಿ.ಪಿ. ವರ್ಗೀಸ್, ಕೆ.ಪಿ.ಥಾಮಸ್, ಕೆಪಿಸಿಸಿ ಕಾನೂನು ಹಾಗೂ ಮಾನವ ಹಕ್ಕು ವಿಭಾಗದ ಪ್ರ.ಕಾರ್ಯದರ್ಶಿ ಎ.ಸಿ ಜಯರಾಜ್, ಕಾಂಗ್ರೆಸ್ ಮುಖಂಡರಾದ ಕೆ.ಪಿ. ತೋಮಸ್, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯ ಮಹಮ್ಮದ್ ಇಕ್ಬಾಲ್, ಮಸೀದಿ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್, ಕೆ.ಕೆ.ಇಸ್ಮಾಯಿಲ್, ಯು.ಕೆ.ಉಮ್ಮರ್, ಕೆ.ಮಹಮ್ಮದ್, ಅಬ್ದುಲ್ ಕುಂಞಿ, ಇಕ್ಬಾಲ್ ಎಸ್., ಹಾರೀಸ್ ಕೌಸರಿ, ಎಂ.ಕೆ.ರಹೀಮ್, ಮುಸ್ತಫಾ ಎಂ., ಜೋಸ್ ಮಾತಾ, ಅಶೋಕ್, ಬೂತ್ ಹಾಗೂ ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ ಸ್ವಾಗತಿಸಿ, ಸರ್ವೋತ್ತಮ ಗೌಡ ವಂದಿಸಿದರು. ನೋಟರಿ ವಕೀಲರು ಇಸ್ಮಾಯಿಲ್ ನೆಲ್ಯಾಡಿ ನಿರೂಪಿಸಿದರು.