ಏಕಕಾಲಕ್ಕೆ ಅವಳಿ ಮಕ್ಕಳು ಜನಿಸುವುದು ಸಾಮಾನ್ಯ ವಿಷಯ. ಇನ್ನೂ ಅಪರೂಪದ ಸಂದರ್ಭದಲ್ಲಿ ಏಕಕಾಲದಲ್ಲಿ ನಾಲ್ಕು ಮಕ್ಕಳು ಜನಿಸಿದಂತಹ ಪ್ರಕರಣಗಳೂ ಬೆಳಕಿಗೆ ಬಂದಿವೆ. ಇಂತಹ ಸುದ್ದಿಗಳನ್ನು ನೀವು ಕೂಡಾ ಕೇಳಿರುತ್ತೀರಿ ಅಲ್ವಾ. ಆದರೆ ಇಲ್ಲೊಬ್ಬರು ಮಹಾತಾಯಿ ಏಕಕಾಲಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಭಾರೀ ವೈರಲ್ ಆಗಿದ್ದು, ಇದು ನಿಜಕ್ಕೂ ಅಚ್ಚರಿಯ ಸಂಗತಿ ಎಂದು ನೆಟ್ಟಿಗರು ಹೇಳಿದ್ದಾರೆ.
ಈ ಘಟನೆ ಪಾಕಿಸ್ತಾನದಲ್ಲಿ ನಡದಿದ್ದು, ಇಲ್ಲಿನ ನಿವಾಸಿಯಾಗಿರುವಂತಹ ಮೊಹಮ್ಮದ್ ವಹೀದ್ ಎಂಬವರ ಪತ್ನಿ ಜೀನತ್ ವಹೀದ್ ಎಂಬ 27 ವರ್ಷದ ಮಹಿಳೆ ಒಂದು ಗಂಟೆಯೊಳಗೆ ಬರೋಬ್ಬರಿ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕಳೆದ ಶುಕ್ರವಾರ (ಏಪ್ರಿಲ್ 19)ರಂದು ಪಾಕಿಸ್ತಾನದ ರಾವಲ್ಪಿಂಡಿಯ ಜಿಲ್ಲಾಸ್ಪತ್ರೆಯಲ್ಲಿ ಜೀನತ್ ನಾಲ್ಕು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಿಶುಗಳನ್ನು ಇನ್ಕ್ಯುಬೇಟರ್ ಗಳಲ್ಲಿ ಇರಿಸಲಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಪಾಕಿಸ್ತಾನದ ಡಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜೀನತ್ ಅವರಿಗೆ ಇದು ಚೊಚ್ಚಲ ಹೆರಿಗೆಯಾಗಿದ್ದು, ಏ.18 ರಂದು ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು ಕುಟುಂಬಸ್ಥರು ರಾವಲ್ಪಿಂಡಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ನಂತರ ಏ.18 ರಂದು ಒಂದು ಗಂಟೆಯ ಅವಧಿಯೊಳಗೆ ಜೀನತ್ ಒಂದರ ನಂತರ ಒಂದರಂತೆ ಆರು ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ. ಆರು ಮಕ್ಕಳು ಎರಡು ಪೌಂಡ್ ಗಳಿಗಿಂತ ಕಡಿಮೆ ತೂಕವನ್ನು ಹೊಂದಿದ್ದು, ಎಲ್ಲಾ ಶಿಶುಗಳು ಕೂಡಾ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಂತಹ ಪ್ರಕರಣಗಳು ತೀರ ವಿರಳವಾಗಿ ಸಂಭವಿಸುತ್ತದೆ. ಪ್ರತಿ 4.5 ಬಿಲಿಯನ್ ಮಹಿಳೆಯರಲ್ಲಿ ಯಾರಾದರೂ ಒಬ್ಬರು ಹೀಗೆ ಏಕಕಾಲಕ್ಕೆ ಆರು ಮಕ್ಕಳಿಗೆ ಜನ್ಮವನ್ನು ನೀಡುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.