ಕೇರಳದಲ್ಲಿ ಹಕ್ಕಿ ಜ್ವರ: ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ, ಗಡಿಗಳಲ್ಲಿ ವಿಶೇಷ ಚೆಕ್ ಪೋಸ್ಟ್​

ಶೇರ್ ಮಾಡಿ

ಕೇರಳದ ಅಲಪ್ಪುಳ ಜಿಲ್ಲೆಯ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕೇರಳದ ಗಡಿ ಭಾಗಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಇಂದಿನಿಂದ (ಸೋಮವಾರ) ತಲಪಾಡಿ, ಜಾಲ್ಸೂರು ಮತ್ತು ಸಾರಡ್ಕದಲ್ಲಿ ವಿಶೇಷ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು. ಈ ಚೆಕ್ ಪೋಸ್ಟ್​​ಗಳಲ್ಲಿ ಕೋಳಿ ಉತ್ಪನ್ನಗಳನ್ನು ಕೇರಳಕ್ಕೆ ತಲುಪಿಸಿದ ನಂತರ ದಕ್ಷಿಣ ಕನ್ನಡಕ್ಕೆ ಹಿಂದಿರುಗುವ ವಾಹನಗಳನ್ನು ಸ್ಯಾನಿಸೈಟಸ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಹಕ್ಕಿ ಜ್ವರ ವಿಶಿಷ್ಟವಾಗಿ ವಲಸೆ ಹಕ್ಕಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಪ್ರಸ್ತುತ ಬೇಸಿಗೆಯಲ್ಲಿ ಹಕ್ಕಿಗಳ ವಲಸೆ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ವೈರಸ್ ಸೋಂಕಿತ ಕೋಳಿಗಳಿಂದ ಇತರ ಪಕ್ಷಿಗಳಿಗೆ ಮತ್ತು ಮನುಷ್ಯರಿಗೆ, ವಿಶೇಷವಾಗಿ ಕೋಳಿ ಸಾಕಣೆ ಕೇಂದ್ರಗಳು ಮತ್ತು ಮಾಂಸ ಸಂಸ್ಕರಣಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹರಡಬಹುದು. ಆದಾಗ್ಯೂ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಏನಿದು ಹಕ್ಕಿ ಜ್ವರ?
ಹೆಚ್​​5ಎನ್​​1 ವೈರಸ್​​ನಿಂದ ಹರಡುವ ಸೋಂಕನ್ನು ಹಕ್ಕಿ ಜ್ವರ ಎಂದು ಕರೆಯಲಾಗುತ್ತದೆ. ಈ ವೈರಸ್ ಹೆಚ್ಚಿನ ಮರಣ ಪ್ರಮಾಣದೊಂದಿಗೆ ತೀವ್ರವಾದ ಜ್ವರವನ್ನು ಉಂಟುಮಾಡಬಲ್ಲದ್ದಾಗಿದೆ. ಆದರೆ, ಮನುಷ್ಯರಲ್ಲಿ ಈ ರೋಗದ ಹರಡುವಿಕೆ ಬಹಳ ಅಪರೂಪ. ಇಲ್ಲಿಯವರೆಗೆ, ಈ ವೈರಸ್ ಮಾನವರಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹರಡಿದ ಬಗ್ಗೆ ವರದಿಯಾಗಿಲ್ಲ. ಆದರೂ ಈ ಬಗ್ಗೆ ನಿರ್ಲಕ್ಷ್ಯ ತೋರುವಂತಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.

ಹಕ್ಕಿ ಜ್ವರವನ್ನು ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲಾಗುತ್ತದೆ. ಇದು ಸಾಂಕ್ರಾಮಿಕ ಸೋಂಕು ಆಗಿದ್ದು, ಪಕ್ಷಿಗಳಿಗೆ ಮಾತ್ರವಲ್ಲ, ಕೆಲವೊಮ್ಮೆ ಮಾನವರು ಮತ್ತು ಇತರ ಪ್ರಾಣಿಗಳಿಗೂ ಸೋಂಕು ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮೂಲದ ಪ್ರಕಾರ, ಹಕ್ಕಿ ಜ್ವರಕ್ಕೆ ಕಾರಣವಾಗುವ ವೈರಸನ್ನು 1997ರಲ್ಲಿ ಮೊದಲು ಮಾನವರಲ್ಲಿ ಕಂಡುಹಿಡಿಯಲಾಗಿತ್ತು.

Leave a Reply

error: Content is protected !!