ನೆಲ್ಯಾಡಿ: ತಾಳಿ ಕಟ್ಟಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ ಮಂಟಪದಲ್ಲೇ ಮದುವೆ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ಎ.26ರಂದು ನಡದಿದೆ.
ಕೊಣಾಲು ಕೋಲ್ಪೆಯ ಯುವಕನಿಗೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ಯುವತಿ ಸರಸ್ವತಿಯೊಂದಿಗೆ ಮದುವೆ ನಿಗದಿಯಾಗಿತ್ತು. ಎ.26ರಂದು ಬೆಳಿಗ್ಗೆ 11.35ರ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಡೆದು ಮಧ್ಯಾಹ್ನ 1 ಗಂಟೆಗೆ ಕೊಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟ ನಿಗದಿಯಾಗಿತ್ತು. ಅದರಂತೆ ವರ ಹಾಗೂ ವಧುವಿನ ಕಡೆಯವರು ದೇವಸ್ಥಾನಕ್ಕೆ ಮದುವೆ ದಿಬ್ಬಣದಲ್ಲಿ ಬಂದಿದ್ದರು. ಧಾರೆಯ ಸೀರೆ ಹಾಗೂ ಶೃಂಗಾರದೊಂದಿಗೆ ಮದುವೆ ಮಂಟಪಕ್ಕೆ ಬಂದಿದ್ದ ವಧು ಸರಸ್ವತಿ ಹಾಗೂ ವರ ಪರಸ್ಪರ ಹೂಮಾಲೆ ಹಾಕಿಸಿಕೊಂಡಿದ್ದರು. ವರ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು ತಾಳಿ ಕಟ್ಟಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆ ಮುರಿದು ಬಿದ್ದಿದೆ.
ಎರಡೂ ಕಡೆಯವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ್ದು ಅಲ್ಲಿ ಮಾತುಕತೆ ನಡೆಸಿ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು ಎಂದು ವರದಿಯಾಗಿದೆ.