ಪೆರಿಯಶಾಂತಿ: ಪೊಲೀಸರಿದ್ದ ಕಾರು ಇನ್ನೊಂದು ಕಾರಿಗೆ ಡಿಕ್ಕಿ, ಚಾಲಕರೊಳಗೆ ವಾಗ್ವಾದ, ಹಲ್ಲೆ – ಆರೋಪ

ಶೇರ್ ಮಾಡಿ

ನೆಲ್ಯಾಡಿ: ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಪೊಲೀಸ್ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ಖಾಸಗಿ ಕಾರು ಹಾಗೂ ಉಪ್ಪಿನಂಗಡಿ ಯಿಂದ ಶಿರಾಡಿಗೆ ದಂಪತಿ ಸಂಚರಿಸುತ್ತಿದ್ದ ಕಾರಿನ ನಡುವೆ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಪೆರಿಯ ಶಾಂತಿಯಲ್ಲಿ ಡಿಕ್ಕಿ ಸಂಭವಿಸಿ ಬಳಿಕ ಅವರೊಳಗೆ ವಾಗ್ವದ, ಹಲ್ಲೆ ನಡೆದಿರುವ ಘಟನೆ ಎ.27ರಂದು ಮಧ್ಯಾಹ್ನ ನಡೆದಿದೆ.

ಬೆಂಗಳೂರಿನಲ್ಲಿ ಸಿಐಡಿಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಆಂಜನಪ್ಪ ಹಾಗೂ ಇನ್ನಿಬ್ಬರು ಕಾಪುಗೆ ಚುನಾವಣೆ ಕರ್ತವ್ಯಕ್ಕೆ ಆಗಮಿಸಿದವರು ಎ.27ರಂದು ಬೆಳಿಗ್ಗೆ ಧರ್ಮಸ್ಥಳ, ಸೌತಡ್ಕ ದೇವಸ್ಥಾನಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯಕ್ಕೆ ತಮ್ಮ ಖಾಸಗಿ ಕಾರಿನಲ್ಲಿ ಹೋಗುತ್ತಿದ್ದವರು ಪೆರಿಯಶಾಂತಿಯಲ್ಲಿ ಉಪ್ಪಿನಂಗಡಿಯಿಂದ ಶಿರಾಡಿಗೆ ಬರುತ್ತಿದ್ದ ಅಶ್ವಿನ್ ಹಾಗೂ ಅವರ ಪತ್ನಿ ನಿಶ್ಮಿತಾ ಎಂಬವರು ಪ್ರಯಾಣಿಸುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದರೂ ಪೊಲೀಸ್ ಸಿಬ್ಬಂದಿಗಳು ತಮ್ಮ ಕಾರು ನಿಲ್ಲಿಸದೆ ತುಸು ಮುಂದಕ್ಕೆ ಚಲಿಸಿದ್ದು ಕಾರು ಹಿಂಬಾಲಿಸಿದ ಅಶ್ವಿನ್ ಅವರು ಪೊಲೀಸರಿದ್ದ ಕಾರು ತಡೆದು ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿದರೆಂದು ಹೇಳಲಾಗಿದೆ. ಇದರಿಂದ ಕುಪಿತರಾದ ಹೆಡ್ ಕಾನ್ಸ್ಟೇಬಲ್ ಆಂಜನಪ್ಪ ಅವರು ತನ್ನಲ್ಲಿದ್ದ ಲಾಠಿಯಿಂದ ಅಶ್ವಿನ್ ಅವರ ಮೇಲೆ ಹಲ್ಲೆ ನಡೆಸಿದರೆಂದು ವರದಿಯಾಗಿದೆ. ಈ ವಿಚಾರವಾಗಿ ಎರಡೂ ಕಡೆಯವರ ನಡುವೆ ಪರಸ್ಪರ ವಾಗ್ವಾದ ನಡೆದಿದ್ದು ಸ್ಥಳಕ್ಕೆ ಆಗಮಿಸಿದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಎರಡೂ ಕಡೆಯವರನ್ನು ವಾಹನ ಸಮೇತ ಠಾಣೆಗೆ ಕರೆದೊಯ್ದಿದ್ದು ಠಾಣೆಯಲ್ಲಿ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥ ಗೊಂಡಿದೆ ಎಂದು ತಿಳಿದು ಬಂದಿದೆ.

Leave a Reply

error: Content is protected !!