ನೆಲ್ಯಾಡಿ: ಮಗು ಸಹಿತ ಮಹಿಳೆ ನಾಪತ್ತೆ- ದೂರು

ಶೇರ್ ಮಾಡಿ

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಕಟ್ಟೆಮಜಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಸೋನು ಸೋಂಕರ್ ಎಂಬವರ ಪತ್ನಿ ರೀಮಾ ಸೋಂಕರ್(26) ಮತ್ತು ಮಗು ರಿಯಾ(1) ಎಂಬಿಬ್ಬರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂಟಿರಿಯರ್ ಡೆಕೊರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೋನು ಸೋಂಕರ್ ಉತ್ತರ ಪ್ರದೇಶದ ಅಜಾಮ್ ಘರ್ ಜಿಲ್ಲೆಯ ಅಮಹಾಮಾಫಿ ಗ್ರಾಮದ ನಿವಾಸಿಯಾಗಿದ್ದು, ಕೌಕ್ರಾಡಿಯಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಸೋನು ಸೋಂಕರ್ ದಿನಾಂಕ: 22.04.2024 ಬೆಳಗ್ಗೆ 8.30 ಗಂಟೆಗೆ ಕೆಲಸಕ್ಕೆಂದು ಹೋಗಿದ್ದು ವಾಪಸ್ಸು ಸಂಜೆ 7.30 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಲಾಗಿತ್ತು. ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ಮನೆಯಲ್ಲಿ ಪತ್ನಿ ರೀಮಾ ಸೋಂಕರ್ ಮತ್ತು 1 ವರ್ಷ ಪ್ರಾಯದ ಮಗು ರಿಯಾ ಮನೆಯಲ್ಲಿ ಇಲ್ಲದೇ ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಪೋನ್ ನೆಲದಲ್ಲಿ ಬಿದ್ದುಕೊಂಡಿತ್ತು. ಮನೆ ಮಾಲೀಕರು ಹಾಗೂ ಅಕ್ಕಪಕ್ಕದ ಮನೆಯವರಲ್ಲಿ ರೀಮಾಳ ಬಗ್ಗೆ ವಿಚಾರಿಸಿದಾಗ ಅವಳು ಬೆಳಿಗ್ಗೆ 10 ಗಂಟೆಗೆ ಮನೆಗೆ ಬೀಗ ಹಾಕಿ ಮಗುವಿನೊಂದಿಗೆ ಹೋಗುವುದನ್ನು ಕಂಡಿರುವುದಾಗಿ ತಿಳಿಸಿದ್ದು ನಂತರ ಎಲ್ಲಾ ಕಡೆ ಹುಡುಕಿದರು ಎಲ್ಲಿಯೂ ಪತ್ತೆಯಾಗದೇ ಇರುವುದರಿಂದ ವಿಳಂಬಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

ನಾಪತ್ತೆಯಾಗಿರುವ ತಾಯಿ ಮಗುವಿನ ಬಗ್ಗೆ ಯಾರಿಗಾರದರೂ ಸುಳಿವು ಸಿಕ್ಕಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ವಿನಂತಿಸಲಾಗಿದೆ.

Leave a Reply

error: Content is protected !!