ಹಕ್ಕಿ ಜ್ವರ ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗಿರಬೇಕು?

ಶೇರ್ ಮಾಡಿ

ಅಲ್ಲದೇ ಗಡಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಸೋಂಕು ದೇಶೀಯ ಕೋಳಿಗಳಿಗೆ ಸುಲಭವಾಗಿ ಹರಡುತ್ತದೆ. ಸೋಂಕಿತ ಪಕ್ಷಿಗಳ ಮಲ, ಮೂಗಿನ ಸ್ರಾವ ಅಥವಾ ಬಾಯಿ ಅಥವಾ ಕಣ್ಣುಗಳಿಂದ ಸ್ರವಿಸುವಿಕೆಯ ಸಂಪರ್ಕದ ಮೂಲಕ ಈ ರೋಗವು ಮನುಷ್ಯರಿಗೆ ಹರಡುತ್ತದೆ. ಹಾಗಿದ್ರೆ ಈ ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಹಕ್ಕಿ ಜ್ವರ ಎಂದರೇನು?
ಏವಿಯನ್ ಇನ್ ಫ್ಲುಯೆಂಜಾ ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು. ಆದರೆ ಇದು ಮನುಷ್ಯರಿಗೆ ಕೂಡ ಹಬ್ಬುವ ಕಾರಣದಿಂದಾಗಿ ತುಂಬಾ ಭೀತಿಯ ವಾತಾವರಣ ಸೃಷ್ಟಿಯಾಗಿದೆ.

ಹಲವಾರು ರೀತಿಯ ಹಕ್ಕಿ ಜ್ವರದ ಮಾದರಿಗಳನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ ನಾಲ್ಕು ಮಾದರಿಯಾಗಿರುವಂತಹ H5N1, H7N9, H5N6 ಮತ್ತು H5N8 ಮಾದರಿಯ ಹಕ್ಕಿ ಜ್ವರಗಳು ಇತ್ತೀಚಿನ ವರ್ಷಗಳಲ್ಲಿ ಆತಂಕ ಸೃಷ್ಟಿಸಿದೆ.

H5N1, H7N9, H5N6 ಮಾದರಿಯ ಹಕ್ಕಿ ಜ್ವರದ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದೆ. ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ. ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುತ್ತದೆ.

ಆದರೆ ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಇದುವರೆಗೆ ಹಬ್ಬಿರುವುದು ತಿಳಿದುಬಂದಿಲ್ಲ. H5N8 ಮಾದರಿಯ ಹಕ್ಕಿ ಜ್ವರದ ವೈರಸ್ ಇದುವರೆಗೆ ವಿಶ್ವದಲ್ಲಿ ಮನುಷ್ಯರಲ್ಲಿ ಕಂಡುಬಂದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ ತಿಳಿಸಿದೆ.

2020ರಿಂದ H5N1 ವೈರಸ್ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಹರಡುತ್ತಿದೆ. 80ಕ್ಕೂ ಹೆಚ್ಚು ದೇಶಗಳಲ್ಲಿ (ಡಿಸೆಂಬರ್ 2023 ರಂತೆ) ಪಕ್ಷಿಗಳಿಗೆ ಈ ಸೋಂಕು ತಗುಲಿದೆ. ಈ ವೈರಸ್‌ ಕಾಣಿಸಿಕೊಂಡ ಹಿನ್ನೆಲೆ ವಾಣಿಜ್ಯ ಕೋಳಿ ಸಾಕಣೆ ಕೇಂದ್ರಗಳಲ್ಲಿ ಲಕ್ಷಾಂತರ ಕೋಳಿಗಳನ್ನು ಕೊಲ್ಲಲಾಗಿದೆ.

ಈ ವೈರಸ್ ಮೊದಲಿಗೆ 1996ರಲ್ಲಿ ಚೀನಾದಲ್ಲಿ ಪತ್ತೆಯಾಗಿದ್ದು, ನಂತರ ಜಗತ್ತಿನಾದ್ಯಂತ ಹರಡಿತು. ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಈ ರೋಗದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ. ಇಲ್ಲಿಯವರೆಗೆ ಮನುಷ್ಯನಿಂದ ಮನುಷ್ಯನಿಗೆ ಹರಡಿರುವ ಯಾವುದೇ ಪುರಾವೆಗಳಿಲ್ಲ.

ರೋಗ ಲಕ್ಷಣಗಳೇನು?
-ಕೆಮ್ಮು
-ಉಸಿರಾಟದಲ್ಲಿ ತೊಂದರೆ
-ತೀವ್ರ ಜ್ವರ
-ತಲೆನೋವು
-ಸ್ನಾಯುಗಳ ನೋವು
-ಮೂಗು ಸೋರುವಿಕೆ
-ಗಂಟಲಿನ ಊತ
-ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ

*ಕೆಲವರಲ್ಲಿ ವಾಕರಿಕೆ, ವಾಂತಿ ಮತ್ತು ಬೇಧಿಯು ಕಂಡುಬರುತ್ತದೆ ಎಂದು ಹೇಳಲಾಗಿದೆ. ಇನ್ನು ಕೆಲವರಲ್ಲಿ ಕಣ್ಣು ಕೆಂಪಾಗುವ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು. ಸೋಂಕು ದೇಹವನ್ನು ಒಗ್ಗಿಕೊಂಡು 2-5 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಅಪಾಯದಿಂದ ಪಾರಾಗಬಹುದು.

*ಕೆಲವೊಂದು ವೈರಲ್ ವಿರೋಧಿ ಔಷಧಿಗಳಿಂದ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಸೋಂಕಿನ ತೀವ್ರತೆ ಕಡಿಮೆ ಆಗುತ್ತದೆ.

ಮನುಷ್ಯರಿಗೆ ಹಕ್ಕಿ ಜ್ವರ ಹರಡುವುದು ಹೇಗೆ?
ಸೋಂಕು ತಗುಲಿರುವಂತಹ ಹಕ್ಕಿಯನ್ನು ಸ್ಪರ್ಶಿಸುವುದು, ಅದರ ಹಿಕ್ಕೆಗಳು ಮತ್ತು ಹಾಸನ್ನು ಮುಟ್ಟುವುದು, ಸೋಂಕಿತ ಹಕ್ಕಿಯನ್ನು ಕೊಲ್ಲುವುದು ಅಥವಾ ಅದನ್ನು ಅಡುಗೆಗೆ ಬಳಸುವುದು ಇತ್ಯಾದಿಯಿಂದ ಸೋಂಕು ಹರಡುತ್ತದೆ.

ಮಾಂಸಾಹಾರ ಸೇವಿಸುವವರು ಸರಿಯಾಗಿ ಬೇಯಿಸಿದ ಕೋಳಿ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಹಕ್ಕಿ ಜ್ವರ ಹರಡುವುದಿಲ್ಲ. ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಮೊಟ್ಟೆಗಳನ್ನು ಸೇವಿಸಬಾರದು.

ರೋಗ ಬಾರದಂತೆ ತಡೆಯುವುದು ಹೇಗೆ?
*ಕೈಗಳನ್ನು ನಿರಂತರವಾಗಿ ತೊಳೆಯುತ್ತಿರಿ. ಬಿಸಿ ನೀರು ಮತ್ತು ಸೋಪು ಬಳಸಿ. ಆಹಾರ ಸೇವನೆಗೆ ಮೊದಲು ಅಥವಾ ಅದನ್ನು ತಯಾರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ.
*ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ನ್ನು ಪ್ರಯಾಣದ ವೇಳೆ ಬಳಸಿ.
*ತೆರೆದ ಮಾರುಕಟ್ಟೆ ಅಥವಾ ಹಕ್ಕಿಗಳು ಹೆಚ್ಚಿರುವಂತಹ ಮಾರುಕಟ್ಟೆಯಿಂದ ದೂರವಿರಿ.
*ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಬಾತುಕೋಳಿ ತಿನ್ನಬೇಡಿ.
*ಹಸಿ ಮೊಟ್ಟೆ ಸೇವಿಸಬೇಡಿ.
*ಪ್ರಯಾಣಕ್ಕೆ ಮೊದಲು ಜ್ವರದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಿರಿ. ನೀವು ಹಕ್ಕಿ ಜ್ವರ ಬರದಂತೆ ತಡೆಯಲು ಸಾಧ್ಯವಿಲ್ಲದೆ ಇದ್ದರೂ ಅದರ ಅಪಾಯವನ್ನು ಕಡಿಮೆ ಮಾಡಬಹುದು.
*H5N1 ಹಕ್ಕಿಜ್ವರದ ವೈರಸ್ ಗೆ ಈಗಾಗಲೇ ಲಸಿಕೆ ಕಂಡು ಹಿಡಿಯಲಾಗಿದ್ದು, ಇದಕ್ಕೆ ಅಮೆರಿಕಾದ ಎಫ್ ಡಿಎಯಿಂದ ಅನುಮತಿ ಕೂಡ ಸಿಕ್ಕಿದೆ. ಆದರೆ ಇದನ್ನು ಸಾರ್ವಜನಿಕ ಬಳಕೆಗೆ ಇದುವರೆಗೆ ನೀಡಲಾಗಿಲ್ಲ.
*ಪಾಶ್ಚರೀಕರಿಸಿದ ಡೈರಿ ಉತ್ಪನ್ನಗಳನ್ನೇ ಹೆಚ್ಚು ಬಳಸಬೇಕು.
*ಮೊಟ್ಟೆ ಮತ್ತು ಹಾಲಿನಿಂದ ಹಕ್ಕಿಜ್ವರ ಬರುವ ಅಪಾಯ ತೀರಾ ಕಡಿಮೆ.

Leave a Reply

error: Content is protected !!