ಇಂದು ಮತ್ತು ನಾಳೆ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ನ ವಾರ್ಷಿಕ ಹಬ್ಬ

ಶೇರ್ ಮಾಡಿ

 ಜಾತಿ ಮತ ಬೇಧವಿಲ್ಲದೇ ಆಗಮಿಸುವ ಭಕ್ತಾಧಿಗಳು

ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ದಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಸೈಂಟ್ ಜೋರ್ಜ್ ಓರ್ಥಡೊಕ್ಸ್ ಸಿರಿಯನ್ ದೇವಾಲಯದ ವಾರ್ಷಿಕ ಹಬ್ಬವು 2024 ಮೇ.ತಿಂಗಳ 1 ರಿಂದ 7ರ ವರೆಗಿನ ದಿನಗಳಲ್ಲಿ ಬ್ರಹ್ಮಾವರ ಧರ್ಮಪ್ರಾಂತ್ಯದ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾ ಹಾಗೂ ಹಾಗೂ ಮದ್ರಾಸ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ.ವಂದನೀಯ.ಗೀವರ್ಗೀಸ್ ಮಾರ್ ಫಿಲಕ್ಸಿನೋಸ್ ಮೆತ್ರಾಪೋಲೀತ್ತಾ ರವರ ನೇತೃತ್ವದಲ್ಲಿ ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ಅತೀ ವಿಜೃಂಭಣೆಯಿಂದ  ನಡೆಯಲಿದೆ.

ದೇವಾಲಯದ ಕಿರು ಪರಿಚಯ
ಕರ್ನಾಟಕದಲ್ಲೇ ಅಗ್ರಗಣ್ಯವು ಪ್ರಮುಖವು ಆದ ಸಂತ ಜೋರ್ಜರ ದೇವಾಲಯವು ಕಡಬ ತಾಲ್ಲೂಕಿನ ಇಚ್ಲಂಪಾಡಿಯಲ್ಲಿ ನೆಲೆನಿಂತಿದೆ. ಇದರ ಸ್ಥಾಪನೆಯು 1952 ರಲ್ಲಿ ಕೇರಳದಿಂದ ವ್ಯವಸಾಯ ನಿಮಿತ್ತ ವಲಸೆ ಬಂದ ಸಿರಿಯನ್ ಕ್ರಿಶ್ಚಯನ್ನರ ಆಧ್ಯಾತ್ಮ ಬೇಡಿಕೆಗಳ ಪೂರೈಕೆಗೋಸ್ಕರ ಸ್ಥಾಪಿತವಾಯಿತು. ಕ್ರಿ.ಶ.53ರಲ್ಲಿ ಯೇಸು ಕ್ರಿಸ್ತರ 12 ಶಿಷ್ಯ ವೃಂದದಲ್ಲಿ ಒಬ್ಬರಾದ ಸಂತ ತೋಮಸರಿಂದ ಈ ಸಭೆಯ ಸ್ಥಾಪನೆಯಾಯಿತು. ಓರ್ಥಡೋಕ್ಸ್ ಸಿರಿಯನ್ ಚರ್ಚ್ ನ ಧರ್ಮಪೀಠವು ಕೇರಳದ ಕೊಟ್ಟಾಯಂನಲ್ಲಿನ ದೇವಲೋಕಂ ಎಂಬ ಸ್ಥಳದಲ್ಲಿದೆ. ಸ್ಥಾಪನೆಯಾದ ದಿನದಿಂದ ಅನೇಕ ಭಕ್ತರ ಶಕ್ತಿ ಹಾಗು ಭಕ್ತಿ ಕೇಂದ್ರವೂ, ದುಃಖದ ಪರಿಹಾರದ ಸಾಂತ್ವನ, ವಿಶ್ವಾಸದ ಕೇಂದ್ರವೂ ಆಗಿದೆ. ಇಲ್ಲಿ ಜಾತಿ ಮತ ಬೇಧವಿಲ್ಲದೇ ಆಗಮಿಸುವ ಭಕ್ತಾಧಿಗಳು ಅವರ ನಂಬಿಕೆಯಿಂದ ಅವರಿಗೆ ಲಭಿಸುವ ದೇವರ ಮಹಿಮೆಯು, ಅದ್ಬುತಗಳನ್ನು ಅರಿಯುವ ಸುಂದರ ನಿಮಿಷವು ಹಾಗು ಅನೇಕರಿಗೆ ಮನಸ್ಸಿನ ನೆಮ್ಮದಿಯನ್ನು ದಯಪಾಲಿಸುತ್ತಿದೆ.

ಪವಾಡ ಪುರುಷ ಸೈಂಟ್ ಜೋರ್ಜ್
ಕ್ರಿಸ್ತ ಯೇಸುವಿನ ಉತ್ತಮ ಭಟನಾಗಿ ನೀನು ನನ್ನೊಂದಿಗೆ ಕಷ್ಠವನ್ನು ಸಹಿಸು (2 ತಿಮೋತಿ 2:3) ಎನ್ನುವ ಅ ಸಂತ ಪೌಲರು ತಿಮೋಥಿಗೆ ನೀಡಿದ ಆಹ್ವಾನವು ಅಕ್ಷರಾರ್ಥದಲ್ಲಿ ಎಲ್ಲಾ ವಿಧದಲ್ಲೂ ಜೀವನದ ಶೈಲಿಯನ್ನಾಗಿಸಿದ ಸಂತ ಜೋರ್ಜರು ಮೂರನೇ ಶತಮಾನದ ಉತ್ತರಾರ್ಧದಲ್ಲಿ ಕ್ರಿ.ಶ 275 ರಲ್ಲಿ ಕಪದೋಕಿಯಾದ ಕ್ರೈಸ್ತವ ಕುಟುಂಬದಲ್ಲಿ ಜನಿಸಿದರು. ತಂದೆ ಜೆರೊಂಟಿಯಾಸರಂತೆ ರೋಮನ್ ಸೇನೆಯಲ್ಲಿ ಸಮರ್ಥರಾದ ಸೈನಿಕರಾಗಿದ್ದರು. ಡಯೋಕ್ಲೀಶಿಯನ್ ಚಕ್ರವರ್ತಿಯ ಅಧಿಕಾರವಧಿಯಲ್ಲಿ ಕ್ರಿಶ್ಚಿಯನ್ನರಿಗೆ ಲಭಿಸಿದ ಪೀಡೆಗಳ ಫಲವಾಗಿ ಪಾಲೇಸ್ತೇನಿನ ಡಯಾಸ್ ಪೋಲಿಸ್ ಎಂಬಲ್ಲಿನ ಲಿಡ್ಡಾ ಎನ್ನುವ ಸ್ಥಳದಲ್ಲಿ ಕ್ರಿ.ಶ 303 ರಲ್ಲಿ ರಕ್ತ ಸಾಕ್ಷಿ ಮರಣವನ್ನು ಹೊಂದಿದರು.

ಸಂತ ಜೋರ್ಜರು ಹಾಗೂ ಅಗ್ನಿ ಸರ್ಪವು
ಸಂತ ಜೋರ್ಜರ ಅದ್ಬುತಗಳಲ್ಲಿ ಶ್ರೇಷ್ಠವಾದ ಈ ಅದ್ಬುತವು ಲಿಭಿಯ ಪ್ರದೇಶದ ಸಿಲೇನ ಪಟ್ಟಣದಲ್ಲಿ ಒಂದು ದಿನ ಸೈನಿಕ ಮೇಧಾವಿಯಾಗಿದ್ದ ಇವರು ಕುದುರೆಯ ಮೇಲೆ ಯಾತ್ರೆಯಾಗಿ ಬಂದಂತಹ ಸಂದರ್ಭದಲ್ಲಿ, ಅಲ್ಲಿಯೇ ಸಮೀಪ ಬೆಟ್ಟದ ತಪ್ಪಲಲ್ಲಿ ಪಟ್ಟಣಪೂರ್ತಿ ವಿಷವಾಯು ಉಗುಳುತ್ತಾ ಮಲಿನಗೊಳಿಸುತ್ತಿದ್ದ ಒಂದು ಮಹಾ ಸರ್ಪ ಇತ್ತು. ಕೆಲವು ಪುಸ್ತಕಗಳಲ್ಲಿ ಇದು ಅಗ್ನಿಯನ್ನು ಉಗುಳಲು ಸಾಮರ್ಥ್ಯವಿರುವ ಮಹಾ ವಿಷದ ಸರ್ಪ, ಬೆಂಕಿಯ ರೆಕ್ಕೆಗಳಿರುವ ಮಹಾ ಸರ್ಪ ಎಂದೆಲ್ಲಾ ಈ ಸರ್ಪದ ಬಗ್ಗೆ ಹೇಳಲಾಗುತ್ತಿದೆ.
ಪಟ್ಟಣದ ವಾಸಿಗಳೆಲ್ಲಾ ಒಂದಾಗಿ ಈ ವಿಷ ಸರ್ಪವನ್ನು ಕೊಲ್ಲಲು ಹಲವು ಭಾರಿ ಸೈನ್ಯ ಸಮೇತ ಶ್ರಮಿಸಿದರಾದರೂ ಅತಿ ಕಠಿಣವಾದ ವಿಷವನ್ನು ಅದು ಹೊರಸೂಸುವುದರಿಂದ ಆ ಜನರು ಸ್ವ ರಕ್ಷಣೆಗಾಗಿ ಹಿಂದೆ ಸರಿಯಬೇಕಾಯಿತು. ಈ ಮಹಾಸರ್ಪವನ್ನು ಶಾಂತಗೊಳಿಸಲು ಹಾಗು ಪಟ್ಟಣಕ್ಕೆ ಪ್ರವೇಶಿಸದಿರಲು ಅವರು ದಿನಕ್ಕೆ ಎರಡು ಆಡುಗಳಂತೆ ಎಸೆದು ಆಹಾರ ನೀಡ ತೊಡಗಿದರು. ಆಡುಗಳು ಮುಗಿದಾಗ ಪ್ರತಿ ಕುಟುಂಬದಿಂದ ಒಬ್ಬರಂತೆ ಚೀಟಿ ಹಾಕಿ ಮನುಷ್ಯರನ್ನು ಸ್ವತಃ ಬಲಿಯಾಗಲು ತೀರ್ಮಾನಿಸುತ್ತಾ ಈ ವಿಷ ಸರ್ಪದ ಭಾದೆಗೆ ತಾತ್ಕಾಲಿಕವಾದ ಪರಿಹಾರವನ್ನು ಕಂಡುಕೊಂಡರು. ಈ ರೀತಿಯ ದುಃಖಭರಿತ ಸನ್ನಿವೇಷದಲ್ಲಿ ಅಂದಿನ ದಿನದ ಸರದಿ ಲಭಿಸಿದ್ದು ಆ ಪಟ್ಟಣದ ರಾಜನ ಮಗಳಿಗಾಗಿತ್ತು. ಬಹಳ ದೈವಭಕ್ತೆಯು ಸುಂದರಿಯೂ ಆದ ಆ ರಾಜಕುಮಾರಿಯ ಬದಲಿಯಾಗಿ ಹೋಗದಿರಲು ಯಾರು ಒಪ್ಪದ ಕಾರಣ ರಾಜನಿಗೆ ಬಹಳ ದುಃಖವಾಯ್ತು. ಸಂತ ಜೋರ್ಜರು ಆ ದಾರಿಯಾಗಿ ಹಾದು ಹೋಗುವಾಗ ದುಃಖಭರಿತೆಯಾದ ರಾಜಕುಮಾರಿಯನ್ನು ಕಾಣುವಂತಾಯಿತು. ಆ ರಾಜನ ಅವಿವಾಹಿತೆಯಾದ ಮಗಳು ವಿವಾಹದ ತಯಾರಿಯಿಂದ ಮದುಮಗನ ಜೊತೆಯಾಗಲು ವಿವಾಹಕ್ಕಾಗಿ ಹೋಗುವ ಹಾಗೆ ವಿವಾಹದ ವಸ್ತ್ರಗಳನ್ನು ಧರಿಸುತ್ತಾ ಆಭರಣ ಭೂಷಿತೆಯಾಗಿ ಮರಣವನ್ನು ಸ್ವೀಕರಿಸಲು ದುಷ್ಟ ಅಗ್ನಿ ಸರ್ಪದ ಮುಂದೆ ದುಃಖದೊಂದಿಗೆ ಯೇಸುಕ್ರಿಸ್ತರಲ್ಲಿ ಪ್ರಾರ್ಥಿಸುತ್ತಾ ಮುಂದಕ್ಕೆ ನಡೆಯತೊಡಗಿದಳು. ಶೋಕದ ಈ ಸ್ಥಿತಿಯ ತೀವ್ರತೆಯಿಂದ ಮನನೊಂದು ಪ್ರಾರ್ಥಿಸಿಕೊಂಡಿರಲು ಸಂತ ಜೋರ್ಜರು ಸಮಸ್ಯೆಯ ಪರಿಹಾರಕನು ಎನ್ನುವಂತೆ ಕುದುರೆಯ ಮೇಲೇರಿ ತನ್ನ ಕೈಯಲ್ಲಿದ್ದ ಶೂಲದಿಂದ ಆ ಮಹಾ ಸರ್ಪವನ್ನು ತಿವಿದು ಕೊಂದು ಹಾಕಿದರು. ಬಳಿಕ ಆ ಯುವತಿಯು ಹೊಂದಿದ್ದ ವಸ್ತ್ರವನ್ನು ಪಡೆದು ಆ ಮಹಾಸರ್ಪದ ಕೊರಳಿಗೆ ಸುತ್ತಿ ಕಟ್ಟಿ ಆ ಯುವತಿಗೆ ಸಮರ್ಪಿಸಿದರು. ಅವಳು ಯಾವುದೇ ಕಷ್ಠವಿಲ್ಲದೇ ಆ ಸರ್ಪವನ್ನು ಎಳೆಯುತ್ತಾ ಪಟ್ಟಣದ ಮಧ್ಯೆ ಬಂದಳು. ಆ ಮಾರಕ ಸರ್ಪವನ್ನು ಕಂಡ ಜನರು ಭಯಹೊಂದಿ ಓಡಿ ಅವಿತುಕೊಳ್ಳತೊಡಗಿದರು. “ಭಯ ಪಡಬೇಡಿ, ನೀವು ಯೇಸು ಕ್ರಿಸ್ತನಲ್ಲಿ ನಂಬಿ, ದಿವ್ಯ ಸ್ನಾನ ಹೊಂದಲು ತಯಾರಾದರೆ ನಾನು ಈ ಮಹಾ ಸರ್ಪವನ್ನು ಪೂರ್ಣವಾಗಿ ಸಾಯಿಸಬಲ್ಲೆ”. ಎಂದು ಸಂತ ಜೋರ್ಜರು ಅವರಲ್ಲಿ ಹೇಳಿದರು. ರಾಜನು ಹಾಗು ಜನರು ಬಹಳ ಸಂತೋಷದಿಂದ ಈ ಬೇಡಿಕೆಯನ್ನು ಸ್ವೀಕರಿಸಿದಾಗ ಸಂತ ಜೋರ್ಜರು ಆ ಹಾವನ್ನು ಕೊಂದು ಹಾಕಿದರು. ಆ ಮಹಾ ವಿಷ ಸರ್ಪದ ಶವ ಶರೀರವನ್ನು ದೂರಕ್ಕೆ ಕೊಂಡುಹೋಗಲು ನಾಲ್ಕು ಎತ್ತಿನ ಬಂಡಿಗಳೇ ಬೇಕಾಯ್ತು.
ಸ್ತ್ರೀ ಪುರಷರಲ್ಲದೇ ಹತ್ತು ಸಾವಿರಕ್ಕೂ ಆಧಿಕ ಜನರು ಅಂದು ದೀಕ್ಷಾಸ್ನಾನವನ್ನು ಸ್ವೀಕರಿಸಿದರು. ರಾಜನು ಅನೇಕ ಸಂಪತ್ತುಗಳನ್ನು, ಕಾಣಿಕೆಗಳನ್ನು ಸಂತ ಜೋರ್ಜರಿಗೆ ನೀಡಿದರಾದರೂ ಅವನ್ನೆಲ್ಲ ಬಡವರಿಗೆ ವಿತರಿಸಲು ರಾಜನಿಗೆ ಮರಳಿ ನೀಡುತ್ತಾ, ಮರಳುವ ಸಂದರ್ಭದಲ್ಲಿ ನಾಲ್ಕು ಬೇಡಿಕೆಯನ್ನು ಇಟ್ಟರು. 1.ರಾಜನು ಕ್ರೈಸ್ತ ದೇವಾಲಯವನ್ನು ಸಂರಕ್ಷಿಸಬೇಕು. 2.ಪುರೋಹಿತರಿಗೆ ಆದರಣೆಯನ್ನು ನೀಡಬೇಕು. 3. ರಾಜನು ಪ್ರತಿ ಆರಾಧನಾ ದಿನದಲ್ಲಿ ದೇವಾಲಯದಲ್ಲಿ ಹಾಜರಿರಬೇಕು. 4.ದರಿದ್ರರಲ್ಲಿ ಕರುಣೆ ಹೊಂದಬೇಕು.

ಸಂತ ಜೋರ್ಜರ ರಕ್ತ ಸಾಕ್ಷಿ ಮರಣ
ಡಯೋಕ್ಲೀಷಿಯನ್ ಮಾಕ್ಸಿಮಸ್ ಎಂಬ ರೋಮನ್ ಚಕ್ರವರ್ತಿಯ ಕಾಲದಲ್ಲಿ ಕ್ರೈಸ್ತರು ಅನೇಕ ಪೀಡೆಗಳನ್ನು ಸಹಿಸಬೇಕಾಯ್ತು. ಹಲವರು ಸ್ವರಕ್ಷಣೆಗಾಗಿ ಕರ್ಥನ ಮೇಲಿನ ವಿಶ್ವಾಸವನ್ನು ತ್ಯಜಿಸಬೇಕಾಯ್ತು. ರಾಜನ ಅನ್ಯ ದೇವರ ಆರಾಧನೆಯನ್ನು ನಡೆಸಬೇಕು ಎನ್ನುವ ರಾಜನ ಆಜ್ಞೆಯನ್ನು ಸಾರ್ವಜನಿಕವಾಗಿ ಸಂತ ಜೋರ್ಜರು ಹರಿದು ಹಾಕಿ ಕರ್ಥನಲ್ಲಿನ ವಿಶ್ವಾಸವನ್ನು ಜೋರಾಗಿ ಪ್ರಖ್ಯಾಪಿಸಿದರು. ಹೊರಜಾತಿ ದೇವರ ಜನರ ನೇತಾರ ದೇದ್ಯಾನೋಸನು ಇವರನ್ನು ಬಂದಿಸುತ್ತಾ ಮುಂದಕ್ಕೆ ಹೋಗಲು ಸಮ್ಮತಿಸದೆ, ಸಂತ ಜೋರ್ಜರನ್ನು ಹಗ್ಗದಿಂದ ಕಟ್ಟಿ ಹಾಕಿ, ತೂಗಿ ಹೊಡೆದರು. ತದನಂತರ ಕಬ್ಬಿಣವನ್ನು ಬಿಸಿಮಾಡಿ ಶರೀರವನ್ನು ಸುಡತೊಡಗಿದರು. ಆದರೆ ಯೇಸು ಕ್ರಿಸ್ತರ ಶಕ್ತಿಯಿಂದ ಅವರು ಪೂರ್ಣ ಆರೋಗ್ಯವಾಗಿಯೇ ಇದ್ದರು. ತದನಂತರ ಮಾರಕವಾದ ವಿಷವನ್ನು ಅವರಿಗೆ ನೀಡಿದರು. ವಿಷದಿಂದ ಯಾವುದೇ ಜೀವಹಾನಿ ಸಂಭವಿಸದಿರಲು ವಿಷವನ್ನು ತಂದ ವ್ಯಕ್ತಿ ಮಾನಸಾಂತರ ಹೊಂದಿ ಕ್ರೈಸ್ತವನಾಗಿ ರಕ್ತಸಾಕ್ಷಿ ಮರಣವನ್ನು ಹೊಂದಿದರು. ಇನ್ನು ಅನೇಕ ಶಿಕ್ಷೆಗಳನ್ನು ಸಂತ ಜೋರ್ಜರಿಗೆ ನೀಡಿದರು. ಎರಡು ರಥಗಳ ಚಕ್ರಗಳಿಗೆ ಸಂತ ಜೋರ್ಜರ ಒಂದೊಂದು ಕಾಲುಗಳನ್ನು ಕಟ್ಟಿ ರಥಗಳನ್ನು ವಿಪರೀತ ದಿಕ್ಕುಗಳಿಗೆ ಓಡಿಸಲು ಶ್ರಮಿಸಿದರಾದರು ರಥವು ಚಲಿಸದೆ ತಟಸ್ಥವಾಗಿ ಹೋಯಿತು. ಕೋಪಗೊಂಡ ದೇದ್ಯಾನೋಸನು ಸಂತ ಜೋರ್ಜರನ್ನು ಕುದಿಯುವ ಲೋಹದ ದ್ರಾವಕದಲ್ಲಿ ಹಾಕಿಸಿದನು. ಇದರಿಂದಲೂ ಸಂತ ಜೋರ್ಜರಿಗೆ ಯಾವುದೇ ದೋಷವು ಸಂಭವಿಸಲಿಲ್ಲ. ಪೀಡೆಗಳು ಯಾವುದೂ ಫಲಿಸುವುದಿಲ್ಲ ಎಂದು ಅರಿತ ದೇದ್ಯಾನೋಸನು, ಸಂತ ಜೋರ್ಜರನ್ನು ಅನ್ಯ ದೇವರ ಮುಂದೆ ನಿಲ್ಲಿಸಿ ಆ ದೇವರನ್ನು ಆರಾಧಿಸಲು, ಬಲಿ ನೀಡಲು ಪ್ರೇರೇಪಿಸಿದನು. ಸಂತ ಜೋರ್ಜರು ಸೋಲುವುದನ್ನು ಕಾಣಲು ನಗರದ ಜನಗಳೆಲ್ಲ ಕೂಡಿದ್ದರು. ಸಂತ ಜೋರ್ಜರು ಜೋರಾಗಿ ಕರ್ಥನಲ್ಲಿ ಪ್ರಾರ್ಥನೆಯನ್ನು ಮಾಡಿದರು. ಕೂಡಲೇ ಆಕಾಶದಿಂದ ಬೆಂಕಿ ಬಂದು ಆ ಕ್ಷೇತ್ರದ ಕಟ್ಟಡಗಳು, ವಿಗ್ರಹಗಳು, ಪುರೋಹಿತರು ಬೆಂದು ನಶಿಸಿ ಹೋದರು. ಭೂಮಿ ಬಾಯ್ದೆರೆದು ಅವರನ್ನು ನುಂಗಿತು. ಇದನ್ನು ಕಂಡ ದೇದ್ಯಾನೋಸನ ಮಡದಿ ಅಲೆಕ್ಸಾಂಡ್ರ ಕರ್ಥನಲ್ಲಿ ನಂಬ ತೊಡಗಿದಳು. ಸಂತ ಜೋರ್ಜರನ್ನು ಪೀಡಿಸಿ ಜನರನ್ನು ಭಯಗೊಳಿಸಿ ಕ್ರಿಸ್ತನನ್ನು ನಂಬಿದ ವಿಶ್ವಾಸಿಗಳನ್ನು ತಡೆಯುವದು ಸಾಧ್ಯವಾಗದರಿಂದ ಕೋಪಗೊಂಡ ದೇದ್ಯಾನೋಸನು ಸಂತ ಜೋರ್ಜರನ್ನು ಖಡ್ಗದಿಂದ ಕಡಿದು ಕೊಲ್ಲಿಸಿ ಶಿರಸ್ಸನ್ನು ಛೇಧಿಸಿದನು. ಆದರೂ ಅನೇಕರು ಕ್ರಿಸ್ತನಲ್ಲಿ ನಂಬಿದರು. ಸಂತ ಜೋರ್ಜರನ್ನು ವಧಿಸಿದ ಸ್ಥಳದಿಂದ ನಿರ್ಗಮಿಸಿದಾಗ ದೇದ್ಯಾನೋಸನು ಸಂತ ಜೋರ್ಜರನ್ನು ಪೀಡಿಸಿದ ಅದೇ ಜಾಗದಲ್ಲಿ ಬೆಂಕಿಗಾಹುತಿಯಾದನು.
ಪಾಶ್ಚಾತ್ಯ ಹಾಗು ಪೌರಸ್ತ್ಯ ಸಭೆಗಳು ನಾಲ್ಕನೇ ಶತಮಾನದಿಂದ ಸಂತ ಜೋರ್ಜರ ಸ್ಮರಣೆಯ ಹಬ್ಬವನ್ನು ಎಪ್ರಿಲ್ 23 ನೇ ತಾರೀಖಿನಂದು ಆಚರಣೆ ಮಾಡಲು ತೊಡಗಿದರು.

ಇಚ್ಲಂಪಾಡಿ ಪ್ರಸಿದ್ದ ಹಬ್ಬ:
ಇಚ್ಲಂಪಾಡಿ ಹಬ್ಬವೆಂದೇ ಪ್ರಸಿದ್ದಿ ಹೊಂದಿರುವ ಸಂತ ಜೋರ್ಜರ ಹಬ್ಬವು ಪ್ರತೀ ವರ್ಷ ಮೇ.1 ರಿಂದ ಆರಂಭವಾಗಿ ಮೇ.6 ಹಾಗು 7 ರಂದು ಅತೀ ವಿಜೃಂಭಣೆಯಿಂದ ನಡೆಯುವುದು. ಮೇ.1 ರ ದಿವ್ಯ ಬಲಿ ಪೂಜೆಯ ನಂತರ ಧ್ವಜಾರೋಹಣದ ಮೂಲಕ ಈ ಐತಿಹಾಸಿಕ ಹಬ್ಬ ಪ್ರಾರಂಭಗೊಂಡು ಪ್ರತಿದಿನ ದಿವ್ಯ ಬಲಿಪೂಜೆಯ ನಂತರ ಧ್ಯಾನ ಪ್ರಾರ್ಥನೆ ನಿರಂತರವಾಗಿ ನಡೆಯುತ್ತದೆ. ಮೇ.6 ರಂದು ಸಂಧ್ಯಾ ಪ್ರಾರ್ಥನೆ ಹಾಗು ಮೆರವಣಿಗೆ ಹಾಗು ಮೇ.7 ರಂದು ದಿವ್ಯ ಬಲಿಪೂಜೆ ಧರ್ಮಾಧ್ಯಕ್ಷರುಗಳ ನೇತೃತ್ವದಲ್ಲಿ ನಡೆಯುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾಧಿಗಳಿಗೆ ಮಧ್ಯಾಹ್ನದ ಭೋಜನವನ್ನು ನೀಡಲಾಗುತ್ತದೆ. ದಿವ್ಯ ಬಲಿ ಪೂಜೆಯ ನಂತರ ಹರಕೆಗಳ ನೆರವೇರಿಸುವಿಕೆ ಪ್ರಾರಂಭವಾಗುತ್ತದೆ. ತದನಂತರ ಏಲಂ ಮೆರವಣಿಗೆ ಹಾಗೂ ಆಶೀರ್ವಾದದೊಂದಿಗೆ ಮುಕ್ತಾಯವಾಗುವ ಹಬ್ಬದಲ್ಲಿ ಭಕ್ತವೃಂದಕ್ಕೆ ಹಬ್ಬದ ಪ್ರಸಾದವಾದ ಅಪ್ಪ ಹಾಗು ಕೋಳಿ ಪದಾರ್ಥವನ್ನು ಎಲ್ಲರಿಗೂ ಹಂಚಲಾಗುತ್ತದೆ. ಸಂತ ಜೋರ್ಜರ ಮುಂದೆ ಕೈ ಜೋಡಿಸಿ ಪರಿಪೂರ್ಣ ಭಕ್ತಿ ಹಾಗು ಅಚಲ ವಿಶ್ವಾಸದಿಂದ ಬೇಡಿದವರ ಉದ್ದಿಷ್ಠ ಕಾರ್ಯ ಸಫಲವಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿದೆ ಎನ್ನುವದಕ್ಕೆ ವರ್ಷದಿಂದ ವರ್ಷಕ್ಕೆ ಇಲ್ಲಿಗಾಗಮಿಸುತ್ತಿರುವ ವೃಧಿಸುತ್ತಿರುವ ಭಕ್ತರ ಸಂಖ್ಯೆಯೇ ಸಾಕ್ಷಿ.

ಹರಕೆಗಳು
ಇಲ್ಲಿ ವಿವಿಧ ತೆರನಾದ ಕಾಣಿಕೆಗಳನ್ನು ಸಲ್ಲಿಸುವುದು, ಶಿಲುಭೆ ಹಿಡಿದು ಮೆರವಣಿಗೆ ಹೋಗುವುದು, ಉರುಳು ಸೇವೆ, ಮೊಣಕಾಲ ಮೇಲೆ ನಡೆಯುವುದು, ಮೇಣದ ಬತ್ತಿ ಉರಿಸುವುದು, ಕೋಳಿ ಹಾಗೂ ಅಪ್ಪವನ್ನು ಹರಕೆಯಾಗಿ ತರುವುದು, ಮಕ್ಕಳನ್ನು ದೇವರ ಮುಂದೆ ಸಮರ್ಪಿಸಿ ಪ್ರಾರ್ಥಿಸುವುದು, ವಿವಿಧ ತೆರನಾದ ಆರೋಗ್ಯದ ಸಮಸ್ಯೆಗಳಿಂದ ಕಾಡುತ್ತಿರುವ ಮಕ್ಕಳನ್ನು ಸಂತ ಜೋರ್ಜರ ಮಧ್ಯಸ್ಥಿಕೆಯಿಂದ ಸಮರ್ಪಿಸಿ ಪ್ರಾರ್ಥಿಸುವುದು, ದೇವಾಲಯದ ಆರಾಧನೆಗಾಗಿ ಬೇಕಾದ ವಸ್ತುಗಳನ್ನು ನೀಡುವುದು, ದಿವ್ಯ ಬಲಿ ಪೂಜೆಗೆ ಹಾಗು ಇತರ ಪ್ರಾರ್ಥನೆಗಳಿಗೆ ಪ್ರಾರ್ಥನೆಗಾಗಿ ಹೆಸರನ್ನು ನೀಡುವುದು, ವಿವಿದ ತೆರನಾದ ಸಮಸ್ಯೆಗಳಿಗೆ ತದರೂಪವನ್ನು ನೀಡಿ ಪ್ರಾರ್ಥಿಸುವದು ಮುಂತಾದ ರೀತಿಯ ಹರಕೆಗಳನ್ನು ಪ್ರಧಾನವಾಗಿ ಇಲ್ಲಿ ಸಲ್ಲಿಸಲಾಗುತ್ತದೆ. ಇಲ್ಲಿನ ಹಬ್ಬದ ಪೂಜೆಯನ್ನು ವಹಿಸಲು ಅವಕಾಶವನ್ನು ನೀಡಲಾಗುತ್ತದೆ.
ಸಂತ ಜೋರ್ಜರ ಮಧ್ಯಸ್ಥಿಕೆಯ ಪ್ರಾರ್ಥನೆಗೆ ಎಲ್ಲರೂ ಭಕ್ತಿ ಪೂರ್ವಕ ಪಾಲ್ಗೊಳ್ಳುತ್ತಾರೆ . ಕೆಲವು ಸಮಸ್ಯೆಗಳಿಗೆ ಪ್ರತ್ಯೇಕ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ ದೇವಾಲಯದ ದಿವ್ಯ ಬಲಿಪೂಜೆಯ ಪರಮ ಪ್ರಸಾದವು ಓರ್ಥಡೊಕ್ಸ್ ವಿಶ್ವಾಸಿಗಳಿಗೆ ಮಾತ್ರ ಸೀಮಿತವಾಗಿದೆಯಾದರೂ ಎಲ್ಲರಿಗೂ ಪೂಜೆಗೆ ಪಾಲ್ಗೊಂಡು ಸಹಕರಿಸಲು ಬೇಕಾದ ಎಲ್ಲಾ ಅನುಕೂಲತೆಗಳನ್ನು ದೇವಾಲಯದಿಂದ ಮಾಡಲಾಗುತ್ತದೆ. ಇಲ್ಲಿ ಅನೇಕರು ಕೋಳಿಗಳನ್ನು ಇಷ್ಠಾರ್ಥ ಸಿದ್ದಿಗಾಗಿ ತರುವುದು ಸಂಪ್ರದಾಯವಾಗಿದೆ. ಆದರೆ ಇಲ್ಲಿ ಹರಕೆಗಾಗಿ ತರುವ ಕೋಳಿಗಳನ್ನಾಗಲೀ ಯಾವುದನ್ನು ಬಲಿ ನೀಡುವುದಿಲ್ಲ ಅಥವಾ ರಕ್ತ ಬಲಿಯ ಸಂಪ್ರದಾಯವು ಈ ದೇವಾಲಯಕ್ಕೆ ಇಲ್ಲ. ಇಲ್ಲಿನ ಕೋಳಿ ಹರಕೆಯನ್ನು ಕೆಲವರು ತಪ್ಪಾಗಿ ಅರ್ಥಮಾಡಿಕೊಂಡವರೂ ಇದ್ದಾರೆ. ಇಲ್ಲಿ ಲಭಿಸುವ ಕೋಳಿಗಳನ್ನು ಬರುವ ಜನರಿಗೆ ಕೋಳಿ ಪದಾರ್ಥವಾಗಿ ಅಪ್ಪದೊಂದಿಗೆ ಹಬ್ಬದ ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಣೆ ಮಾಡುವ ಸಂಪ್ರದಾಯವಿದೆ. ಉಳಿದ ಕೋಳಿಗಳನ್ನು ಏಲಂ ನಡೆಸಲಾಗುವುದು. ಹೀಗೆ ಬಹುತೇಕ ಹರಕೆಗಳು ವಿಶ್ವಾಸ ಶುದ್ದಿಯಿಂದ ನಡೆಸಲ್ಪಡುವುದು..
ಅನೇಕರು ದುಷ್ಠ ಶಕ್ತಿಗಳಿಂದ ರಕ್ಷಣೆಗಾಗಿ, ಸರ್ಪ ದೋಷ ನಿವಾರಣೆಗಾಗಿ, ಕ್ಷುದ್ರ ಜೀವಿಗಳು, ಕೃಷಿಯಲ್ಲಿನ ಕ್ರಿಮಿಕೀಟಗಳ ಬಾಧೆಗಳಿಂದ ಬಳಲುತ್ತಿರುವವರು, ಹವಾಮಾನ ವೈಪರೀತ್ಯಗಳಿಂದ ಕೃಷಿಗಳಲ್ಲಿ ಸಂಕಷ್ಠಗಳನ್ನು ಎದುರಿಸುತ್ತಿರುವವರು, ಕೃಷಿಹಾನಿ ಸಂಭವಿಸಿದವರು, ರುಣಾತ್ಮಕ ಶಕ್ತಿಗಳಿಂದ ಬಳಲುತ್ತಿರುವವರು,ಕುಟುಂಬ, ಜೀವನ, ಉದ್ಯೋಗ, ವಾಣಿಜ್ಯ, ವ್ಯವಸಾಯಗಳಲ್ಲಿ ಎದುರಿಸುತ್ತಿರುವ ಅನೇಕ ಸಮಸ್ಯೆಗಳು, ಅನ್ಯಾಯಗಳಿಂದ ಬಳಲುತ್ತಿರುವವರು, ನ್ಯಾಯಕ್ಕಾಗಿ, ಕಳ್ಳತನದ ಸುಳ್ಳರಿಂದ ಬೇಸತ್ತಿರುವವರು, ಶೈಕ್ಷಣಿಕ ಸಮಸ್ಯೆ ಅನುಭವಿಸುತ್ತಿರುವವರು, ಶೋಷಣೆಯಿಂದ ಸಂರಕ್ಷಣೆಗೆ ಹೀಗೆ ನಾನಾ ವಿಧವಾದ ದೈನಂದಿನ ಜೀವನದಲ್ಲಿ ಎದುರಿಸುವ ಸಮಸ್ಯೆಗಳಿಗೆ ಸ್ವಯಂ ಆಗಿಯೇ ಹರಕೆ ಹೇಳುವುದು, ಹರಕೆ ಈಡೇರಿಸುವುದು ಹಾಗೂ ಸಮರ್ಪಣೆ ಹರಕೆಗಳ ರೀತಿಯಾಗಿದೆ. ಹರಕೆಗಳನ್ನು ನೀಡುವುದರಲ್ಲಿ ಅನೇಕರಿಗೆ ದೇವರ ಅನುಗ್ರಹವು ಲಭಿಸುತ್ತಿರುವುದು ವೃದ್ದಿಸುತ್ತಿರುವ ಭಕ್ತವೃಂದವೇ ಸಾಕ್ಷಿಯಾಗಿದೆ.

* 2024 ಮೇ 1ರಿಂದ 7ರ ವರೆಗೆ ಪವಿತ್ರ ದಿವ್ಯ ಬಲಿ ಪೂಜೆಯ ನಂತರ ಹರಕೆ ಕಾಣಿಕೆಗಳನ್ನು ಸಲ್ಲಿಸಲು ಹಾಗೂ ಭಜನೆ ಕೂರಲು ಅವಕಾಶವಿರುವುದು.
* 2024 ಮೇ 1ರಿಂದ 7ರವರೆಗೆ ಪವಿತ್ರ ದಿವ್ಯ ಬಲಿ ಪೂಜೆಗಳ ಸೇವೆಯನ್ನು ವಹಿಸಲು ಅವಕಾಶವಿರುತ್ತದೆ
* ಕೋಳಿ ಹರಕೆಯನ್ನು ಹಾಗೂ ಅಪ್ಪ ಹರಕೆಯನ್ನು ನೀಡಲು ಬಯಸುವವರು ಮೇ. 7ರಂದು ಬೆಳಗ್ಗೆ 9:00ಗೆ ಮುಂಚಿತವಾಗಿ ಅರ್ಪಿಸುವುದು ಅನುಕೂಲಕರವಾಗಿರುತ್ತದೆ
* 2024 ಮೇ 1ರಿಂದ 6ರವರೆಗೆ ಪವಿತ್ರ ದಿವ್ಯ ಬಲಿ ಪೂಜೆಯ ನಂತರ ಹಾಗೂ ಪ್ರತಿದಿನ ಸಂಧ್ಯ ಪ್ರಾರ್ಥನೆ ನಂತರ ಉರುಳು ಸೇವೆಗೆ ಅವಕಾಶವಿರುವುದು. ಹಾಗೂ ಮೇ. 6 ಮತ್ತು 7ರ ಮೆರವಣಿಗೆಗೆ ಮೊದಲು ಅವಕಾಶವಿರುವುದು.
* ಉರುಳುಸೇವೆ ಮಾಡುವವರು ಸಭ್ಯವಾದ ವಸ್ತ್ರಧಾರಣೆ ಮಾಡತಕ್ಕದ್ದು.
* ಮೇ. 7ರಂದು ಇಚಿಲಂಪಾಡಿಯಿಂದ ನೆಲ್ಯಾಡಿ, ಕಡಬ, ಧರ್ಮಸ್ಥಳ, ಉಪ್ಪಿನಂಗಡಿ ಕಡೆಗೆ ಬಸ್ ಸರ್ವೀಸ್ ಇರುತ್ತದೆ.

06-05-2024 ಸೋಮವಾರ
7:00 a.m                      :                   ಪ್ರಭಾತ ಪ್ರಾರ್ಥನೆ
7.45 a.m                      :                   ಪವಿತ್ರ ದಿವ್ಯ ಬಲಿಪೂಜೆ
                                    :                   ರೆ|ಫಾ| ಬೆನ್ನಿ ಮ್ಯಾಥ್ಯು
                                                        (ಧರ್ಮಗುರುಗಳು, ಸೈಂಟ್ ಮೇರೀಸ್ ಓರ್ಥಡೋಕ್ಸ್ ಚರ್ಚ್, ಎನ್.ಆರ್.ಪುರ)
ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆಗ
12.00 p.m                    :                   ಮಧ್ಯಾಹ್ನದ ಪ್ರಾರ್ಥನೆ
6.00  p.m                     :                   ಸ್ವಾಗತ
6.15  p.m                     :                  ಪಾದಯಾತ್ರಿಗರಿಗೆ ಸ್ವಾಗತ
6.30  p.m                     :                  ಸಂಧ್ಯಾ ಪ್ರಾರ್ಥನೆ
7.30  p.m                     :                  ಹಬ್ಬದ ಸಂದೇಶ
8.00  p.m                     :                 ಮೆರವಣಿಗೆ ಕಾಯರ್ತಡ್ಕ ಶಿಲುಬೆಯವರೆಗೆ
9.30  p.m                     :                 ಆಶೀರ್ವಾದ, ಅನ್ನಸಂತರ್ಪಣೆ
 
07-05-2042 ಮಂಗಳವಾರ
7.00 a.m                      :                ಪ್ರಭಾತ ಪ್ರಾರ್ಥನೆ
8.30 a.m                      :                ಪವಿತ್ರ ದಿವ್ಯ ಬಲಿಪೂಜೆ
ಅತೀ ವಂದನೀಯ ಶ್ರೀ ಗೀವರ್ಗೀಸ್ ಮಾರ್ ಫಿಲಿಕ್ಸಿನೋಸ್
(ಧರ್ಮಾಧ್ಯಕ್ಷರು, ಮಲಂಕರ ಓರ್ಥಡೋಕ್ಸ್ ಸಿರಿಯನ್ ಚರ್ಚ್, ಮದ್ರಾಸ್ ಧರ್ಮಪ್ರಾಂತ್ಯ)
ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, ಹಬ್ಬದ ಸಂದೇಶ, ಜೋರ್ಜಿಯನ್ ಪುರಸ್ಕಾರ 
11.00 a.m                  :                ಅನ್ನಸಂತರ್ಪಣೆ
12.00 p.m                  :               ಏಲA
1.45  p.m                   :               ಮೆರವಣಿಗೆ(ಹೊಸAಗಡಿ ಶಿಲುಬೆ ಗೋಪುರದವರೆಗೆ)
03.00 p.m                  :               ಆಶೀರ್ವಾದ
3.15  p.m                   :               ಪ್ರಸಾದ ವಿತರಣೆ
5.00  p.m                   :               ಹಬ್ಬದ ಧ್ವಜ ಇಳಿಸುವಿಕೆ
 
ಸರ್ವರಿಗೂ ಸ್ವಾಗತ ಬಯಸುವ
 
ರೆ|ಫಾ|ವರ್ಗೀಸ್ ತೋಮಸ್
ವಿಕಾರ್
9483336800
 
ಶ್ರೀ ವಿ.ಎನ್. ಚಾಕೋ
ಸೆಕ್ರೆಟರಿ
9448409143
 
ಶ್ರೀ ಜೋನ್ ಎಬ್ರಹಾಂ, ಚೀರಮಟ್ಟಂ
ಟ್ರಸ್ಟಿ
9740936837
 
ಆಡಳಿತ ಮಂಡಳಿ ಮತ್ತು ಸರ್ವಸದಸ್ಯರು

Leave a Reply

error: Content is protected !!