ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬೇಸಿಗೆ ಕ್ರೀಡಾ ಶಿಬಿರದ ಉದ್ಘಾಟನೆ ನಡೆಯಿತು.
ಉದ್ಘಾಟನೆಯನ್ನು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಂ.ಸತೀಶ್ ಭಟ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ “ಕ್ರೀಡೆಯು ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುತ್ತದೆ. ಒಬ್ಬ ವ್ಯಕ್ತಿ ಅಥವಾ ವಿದ್ಯಾರ್ಥಿ ಮಾನಸಿಕವಾಗಿ ಸದೃಢರಾಗಬೇಕಾದರೆ, ದೈಹಿಕವಾಗಿಯೂ ಸದೃಢರಾಗುವಂತದ್ದು ಅತಿ ಮುಖ್ಯವಾಗುತ್ತದೆ. ಈ ಶಿಬಿರವು ಸೇರಿರುವ ಎಲ್ಲ ಶಿಬಿರಾರ್ಥಿಗಳಲ್ಲಿ ದೈಹಿಕ ಸದೃಢತೆಯನ್ನು ತಂದು ಮಾನಸಿಕ ಸ್ವಾಸ್ಥ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರವನ್ನು ನೀಡಲಿ. ಬಲಿಷ್ಠ ಯುವ ಸಮೂಹದ ನಿರ್ಮಾಣ ಮತ್ತು ಆ ಮೂಲಕ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಈ ಶಿಬಿರ ಸಹಕಾರಿಯಾಗಲಿ” ಎಂದರು.
ಮುಖ್ಯ ಅತಿಥಿಗಳಾದ ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಸೃಜನ್ ಮುಂಡೋಡಿ “ವಿದ್ಯಾರ್ಥಿಗಳು ಇತ್ತೀಚಿನ ಸಂದರ್ಭಗಳಲ್ಲಿ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸದೆ, ಆನ್ಲೈನ್ ಆಟಗಳಿಗೆ ಸದಾ ಗಮನ ಕೊಡುತ್ತಾ ಇರುತ್ತಾರೆ. ಆನ್ಲೈನ್ ಆಟವು ಕ್ರಮೇಣ ಚಟವಾಗಿ ಬದಲಾಗಿ ವಿದ್ಯಾರ್ಥಿಯ ಬೆಳವಣಿಗೆಗೆ ಮಾರಕವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ನಡೆಯುವ ತರಬೇತಿ, ಆಟೋಟಗಳಲ್ಲಿ ಭಾಗವಹಿಸುತ್ತಾ ಮೊಬೈಲ್ ದುಷ್ಚಟದಿಂದ ದೂರವಾಗುವ ಪ್ರಯತ್ನವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ನಿಮಗೆಲ್ಲರಿಗೂ ಶುಭವಾಗಲಿ” ಎಂದು ಹೇಳಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ ಕೋಯ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸ ಕಗಣೇಶ್.ಕೆ ಮ್ಯಾಟ್ ಕಬ್ಬಡಿ ತರಬೇತಿಯನ್ನು ತೆಂಗಿನಕಾಯಿ ಒಡೆಯುವ ಮೂಲಕ ಪ್ರಾರಂಭ ಮಾಡಿದರು.
ವೇದಿಕೆಯಲ್ಲಿ ರಾಷ್ಟ್ರಮಟ್ಟದ ಕಬ್ಬಡಿ ತರಬೇತುದಾರರಾದ ಮೂರ್ತಿ, ಯೋಗೀಶ್ ಮತ್ತು ಪ್ರೌಢಶಾಲೆ ವಿಭಾಗದ ದೈಹಿಕ ಶಿಕ್ಷಕಿ ಪ್ರಫುಲ್ಲ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ್.ಕೆ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕ ಚೇತನ್.ಎಂ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಗ್ರೀಷ್ಮ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು.