ಪ್ರೇತ ಮದುವೆಗೆ ವರ ಸಿಗದೆ ಪತ್ರಿಕಾ ಜಾಹೀರಾತಿನ ಮೊರೆ !

ಶೇರ್ ಮಾಡಿ

ಸುಮಾರು 30 ವರ್ಷದ ಹಿಂದೆ ತೀರಿ ಹೋದ ಯುವತಿಯೊಬ್ಬಳಿಗೆ ಮದುವೆ ಮಾಡಿಸಲು ಪ್ರೇತ ವರ ಸದ್ಯ ಬೇಕಾಗಿದೆ !

ಹೀಗೊಂದು ಜಾಹೀರಾತು ಎಲ್ಲಾದರೂ ಕಂಡು ಬಂದರೆ ಹೇಗಿರುತ್ತದೆ. ಅಚ್ಚರಿಯಾಗದೇ ಇರುತ್ತದೆಯೇ? ಆಗಬಹುದು. ಈಗ ಜೀವಂತ ಹುಡುಗ, ಹುಡುಗಿಯರಿಗೇ ಸೂಕ್ತ ವರ ಅಥವಾ ವಧು ಹುಡುಕಲು ಪೋಷಕರು ಕಷ್ಟಪಡುತ್ತಿದ್ದಾರೆ. ಅಂಥದ್ದ ರಲ್ಲಿ ಈ ಜಾಹೀರಾತು ಎಂದು ತಿರಸ್ಕಾರ ಮಾಡಬಹುದು. ಆದರೆ ಇದು ಅಪ ಹಾಸ್ಯದ ಸಂಗತಿಯಲ್ಲ; ಬದಲಾಗಿ ನಂಬಿಕೆ, ಭಾವನಾತ್ಮಕ ಸಂಗತಿ.

ತುಳು ನಾಡಿನಾದ್ಯಂತ ಮನೆಮಾತಾಗಿರುವ ಪ್ರೇತ ಮದುವೆಯಡಿ ಪ್ರೇತ ವಧುವಿಗೆ ವರನ ಹುಡುಕಾಟದ ಸುದ್ದಿ ಈಗ ಸುದ್ದಿಯಲ್ಲಿದೆ. ವಿಶೇಷವೆಂದರೆ ಜಾಹೀರಾತಿಗೆ 50 ಕ್ಕೂ ಹೆಚ್ಚು ಪ್ರತಿಕ್ರಿಯೆಗಳೂ ಬಂದಿವೆ.

30 ವರ್ಷಗಳ ಹಿಂದೆ ತೀರಿ ಹೋದ ಹೆಣ್ಣು ಮಗುವಿಗೆ ಅದೇ ಜಾತಿಯ ಇತರ ಬದಿಯ 30 ವರ್ಷದ ಹಿಂದೆ ತೀರಿ ಹೋದ ಗಂಡು ಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ ಸಂಪರ್ಕಿಸಿ ಎಂದು ಜಾಹೀರಾತು ಪ್ರಕಟಿಸಲಾಗಿತ್ತು.

ಸಂಪ್ರದಾಯದಂತೆ ನಡೆಯುತ್ತದೆ ಮದುವೆ?
ಪ್ರೇತಗಳ ಮದುವೆ ಎಂದಾಕ್ಷಣ ಅದೇನೂ ಸುಮ್ಮನೆ ಆಗುವುದಿಲ್ಲ, ಸಂಪ್ರದಾಯದ ಪ್ರಕಾರವೇ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಬೇಕಾಗುತ್ತದೆ. ಪ್ರೇತಗಳ ಮದುವೆ ಮಾಡಿಸಲು ಆಷಾಢದ ಒಂದು ದಿನ ಮದುವೆ ಫಿಕ್ಸ್ ಮಾಡಲಾಗುತ್ತದೆ. ಮದುವೆ ದಿನ ಗೊತ್ತುಮಾಡಿದ ಬಳಿಕ ಬಂಧು-ಬಳಗದವರಿಗೆ ಆಹ್ವಾನ ನೀಡಲಾಗುತ್ತದೆ. ಜೀವಂತ ಇರುವವರಿಗೆ ಮದುವೆ ಮಾಡಿಸಿದಂತೆ ಶಾಸ್ತ್ರೋಕ್ತವಾಗಿಯೇ ಮದುವೆ ನಡೆಯುತ್ತದೆ. ಆದರೆ ಈ ಮದುವೆಯಲ್ಲಿ ಹೋಮ ಹವನ ಮಾಡುವುದಿಲ್ಲ, ಮಂತ್ರ ಹೇಳಲು ಪೂಜಾರಿಗಳು ಇರುವುದಿಲ್ಲ. ಬದಲಾಗಿ ಎರಡು ಕುರ್ಚಿ, ಕಲ್ಲಿನ ಮೇಲೆ ಸೀರೆ, ಪಂಚೆ ಇರಿಸಿ ಮದುವೆ ಶಾಸ್ತ್ರ ನೆರವೇರಿಸಲಾಗುತ್ತದೆ. ಸಂಪ್ರದಾಯದಂತೆ ಹುಡುಗಿಗೆ ರೇಷ್ಮೆ ಸೀರೆ, ತಾಳಿ, ಹೂವು ಮತ್ತು ಹುಡುಗನಿಗೆ ಪಂಚೆ, ಶಲ್ಯ ಎಲ್ಲವನ್ನೂ ತಂದು ಮದುವೆ ಮಾಡಲಾಗುತ್ತದೆ. ಮದುವೆ ಬಳಿಕ ಅತಿಥಿಗಳಿಗೆ ಊಟ ಕೂಡ ಹಾಕಲಾಗುತ್ತದೆ. ಪ್ರೇತಗಳಿಗೆ ಮದುವೆ ಮಾಡಿಸಿದ ಎರಡೂ ಕುಟುಂಬಗಳು ಕೂಡ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುತ್ತವೆ.

ಪುತ್ತೂರಿನ ನಿವಾಸಿಯೊಬ್ಬರ ಮನೆ ಮತ್ತು ಕುಟುಂಬದಲ್ಲಿ ಇತ್ತೀಚೆಗೆ ಆತಂಕಕಾರಿ ಘಟನೆಗಳು ನಡೆಯುತ್ತಿದ್ದವು. ಪ್ರಶ್ನೆ ಚಿಂತನೆ ಮೂಲಕ ಅವಲೋಕಿಸಿದಾಗ ಇದು ಪ್ರೇತ ಬಾಧೆ ಎಂದು ತಿಳಿಯಿತು. ಅವರ ಮನೆಯಲ್ಲಿ ಸುಮಾರು 30 ವರ್ಷದ ಹಿಂದೆ 1 ತಿಂಗಳ ಹಸುಗೂಸು ಮೃತಪಟ್ಟಿತ್ತು. ಅದೀಗ ವಿವಾಹ ವಯಸ್ಸಿಗೆ ಬಂದಿರುವುದರಿಂದ ನೆನಪಿಸಲು ಇಂಥ ಘಟನೆಗಳು ನಡೆಯುತ್ತಿವೆ ಎಂದು ತಿಳಿಯಿತು. ಹೀಗಾಗಿ 30 ವರ್ಷದ ಹಿಂದೆ ತೀರಿ ಹೋದಾಕೆಗೆ ಮದುವೆ ಮಾಡಿಸುವಂತೆ ತಿಳಿಸಲಾಯಿತು.

ದಿನಕ್ಕೆ 50 ಕ್ಕಿಂತಲೂ ಅಧಿಕ ಕರೆ ಬಂದಿದೆ. ಅದರಲ್ಲಿ ನಮ್ಮ ಪ್ರೇತ ಮದುವೆಗೆ ಸಂಬಂಧಿಸಿ ಸುಮಾರು 20ಕ್ಕೂ ಅಧಿಕ ಸಂಪರ್ಕ ಸಂಖ್ಯೆಗಳನ್ನು ಗೊತ್ತು ಮಾಡಿ ಮಾತುಕತೆ ನಡೆಸಿ ಮದುವೆ ನಡೆಸಲು ತೀರ್ಮಾನಿಸಲಾಗಿದೆ. ಕೆಲವರು ಪೂರಕವಾಗಿ ಮಾತನಾಡಿದ್ದರೆ, ಇನ್ನೂ ಕೆಲವರು ಅಪಹಾಸ್ಯ ಮಾಡಿದರು ಎಂದರು ಅವರು.

Leave a Reply

error: Content is protected !!