ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಯದ್ವಾತದ್ವ ಚಲಾಯಿಸಿ ಆತಂಕ ಸೃಷ್ಟಿಸಿದ ಮಾನಸಿಕ ಅಸ್ವಸ್ಥ

ಶೇರ್ ಮಾಡಿ

ಪುತ್ತೂರು: ಅಡ್ಡಾದಿಡ್ಡಿ ವಾಹನ ಚಲಾಯಿಸಿದ ವ್ಯಕ್ತಿಯನ್ನು ಕೇರಳದ ಕೊಟ್ಟಾಯಂ ನಿವಾಸಿ ಅರುಣ್ ಎಂದು ಗುರುತಿಸಲಾಗಿದೆ. ಆತನನ್ನು ಬಳಿಕ ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶನಿವಾರ ಸಂಜೆ ಗೋವರ್ಧನ್ ಎಂಬವರು ಠಾಣೆಯಲ್ಲಿ ಠೇವಣಿ ಇಟ್ಟಿದ್ದ ಬಂದೂಕು ಹಿಂಪಡೆದು ಓಮ್ನಿ ಕಾರಿನಲ್ಲಿಟ್ಟು ಮನೆಗೆ ಹೋಗಲು ಅನುವಾಗಿದ್ದರು. ಮಳೆ ಸುರಿದ ಕಾರಣ ಅವಸರದಲ್ಲಿ ಸಂಪ್ಯದ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಕೀ ಅದರಲ್ಲೇ ಬಿಟ್ಟು ಪಕ್ಕದ ಅಂಗಡಿಯಿಂದ ಹಾಲು ಖರೀದಿಸಲು ಹೋಗಿದ್ದರು.

ಇದೇ ವೇಳೆ ಅರುಣ್ ಕಾರನ್ನೇರಿ ಚಲಾಯಿಸಿಕೊಂಡು ಕುಂಬ್ರದೆಡೆಗೆ ಹೋಗಿದ್ದಾನೆ. ಯದ್ವಾತದ್ವಾ ವಾಹನ ಚಲಾಯಿಸಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಈತನ ಅವಾಂತರ ಗಮನಿಸಿದ ಸಾರ್ವಜನಿಕರು ವಾಹನವನ್ನು ಅಡ್ಡಗಟ್ಟಿ ತಡೆದಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದೂಕು ಇರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಸಂಪ್ಯ ಪೊಲೀಸರು ಅರುಣ್ ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅನಾರೋಗ್ಯ ಸಮಸ್ಯೆ ತಿಳಿದುಬಂತು. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಪೋಷಕರಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಂಡರು.

Leave a Reply

error: Content is protected !!