ಮೇ.15 ರಿಂದ ನಿಡ್ಲೆ ಕರುಂಬಿತ್ಲು ಮನೆಯಂಗಳದಲ್ಲಿ 24ನೇ ವರ್ಷದ “ಸಂಗೀತ ಶಿಬಿರ”

ಶೇರ್ ಮಾಡಿ

ನಿಡ್ಲೆ: ಧರ್ಮಸ್ಥಳ ಸಮೀಪದ ನಿಡ್ಲೆ ಕರುಂಬಿತ್ಲು ಮನೆಯಂಗಳದಲ್ಲಿ ಪ್ರತಿ ವರ್ಷ ನಡೆಯುವ 24 ನೇ ವರ್ಷದ “ಸಂಗೀತ ಶಿ ಬಿರ”ವು ಮೇ.15 ರಿಂದ ಮೇ.19ರವರೆಗೆ ನಾಡಿನ ಪ್ರಸಿದ್ಧ ಸಂಗೀತ ಕಲಾವಿದರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಲಿದೆ.

ಸಂಗೀತದೊಳಗಿನ ಆಟ, ಲಯದೊಂದಿಗಿನ ಮೋಜು, ಅಭಿನಯ,ಉಪನ್ಯಾಸ ಮತ್ತು ವಿಶೇಷ ಸಂಗೀತ ಕಚೇರಿಗಳನ್ನೊಳಗೊಂಡ ಕರುಂಬಿತ್ತಿಲ್ ಶಿಬಿರ ಮೇ 15 ರಂದು ಬೆಳಿಗ್ಗೆ ಧರ್ಮಸ್ಥಳದ ಪ್ರಕಾಶ್ ದೇವಾಡಿಗ ಅವರ ಮಂಗಳ ವಾದ್ಯದೊಂದಿಗೆ ಪ್ರಾರಂಭಗೊಳ್ಳಲಿದೆ. ಉಡುಪಿ ಶ್ರೀ ಕೃಷ್ಣ ಮಠದ ಮುಂದಿನ ಭಾವಿ ಪರ್ಯಾಯ ಪೀಠಾಧೀಶ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಗಳವರು ಶಿಬಿರವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಮಠದ ದಿವಾನ ವಿದ್ವಾನ್ ಡಾ.ಉದಯಕುಮಾರ್ ಸರಳತ್ತಾಯ ಅವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಬಳಿಕ ಅಮೇರಿಕಾದ ಡಾ.ರಮೇಶ್ ಶ್ರೀನಿವಾಸನ್ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ ಶ್ರೀಮತಿ ಇಂದಿರಾ ಕಡಂಬಿ ಅವರಿಂದ ಭರತನಾಟ್ಯದಲ್ಲಿ ಅಭಿನಯ – ಉಪನ್ಯಾಸ , ಟಿ.ವಿ.ರಾಮಪ್ರಸಾದ್, ವಿಠ್ಠಲ್ ರಂಗನ್, ಎಂ.ಎಸ್. ವರದನ್ ಮತ್ತು ಪಯ್ಯನೂರು ಗೋವಿಂದ ಪ್ರಸಾದ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಹಾಗು ವಿಷ್ಣು ಆರ್ ಮತ್ತು ತಂಡದವರಿಂದ ನವತಾರ ಕಚೇರಿ ನಡೆಯಲಿದೆ.

ಮೇ.16 ರಂದು ಬೆಳಿಗ್ಗೆ ನಿಡಸೋಸಿ ಶ್ರೀ ದುರುದುಂಡೀಶ್ವರ ಮಠದ ಶ್ರೀನಿಜಲಿಂಗೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಖ್ಯಾತ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ತಂಡದವರಿಂದ ಯಕ್ಷಗಾನ -ವೈಭವ ಪ್ರಸ್ತುತಗೊಳ್ಳಲಿದೆ. ಸಂಜೆ ಶ್ರೀಮತಿ ಚಾರುಮತಿ ರಘುರಾಮನ್ ಮತ್ತು ಅನಂತ ಆರ್. ಕೃಷ್ಣನ್ ಅವರಿಂದ ಬಹು ವಿಶೇಷ ದ್ವಂದ್ವ ಕಾರ್ಯಕ್ರಮ ನಡೆಯಲಿದೆ. ಮೇ.18 ರಂದು ಬೆಳಿಗ್ಗೆ ಪಿಟೀಲು ವಿದ್ವಾಂಸ ವಿದ್ವಾನ್ ಎಚ್ ಕೆ.ನರಸಿಂಹಮೂರ್ತಿ ಅವರನ್ನು ಸಮ್ಮಾನಿಸಲಾಗುವುದು. ಬಳಿಕ ಅವರ ತಂಡದಿಂದ ದ್ವಂದ್ವ ವಯೊಲಿನ್ ವಾದನ, ಸಂಜೆ ಮೈಸೂರು ಚಂದನ್ ಕುಮಾರ್ ಮತ್ತು ತಂಡದಿಂದ ವೀಣಾ ವಾದನ ಕಾರ್ಯಕ್ರಮ ನಡೆಯಲಿದೆ.

ಮೇ 19 ರಂದು ಬೆಳಿಗ್ಗೆ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ!ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬಳಿಕ ರಮಣ ಬಾಲಚಂದ್ರನ್ ಮತ್ತು ತಂಡದಿಂದ ವಿಶೇಷ ವೀಣಾ ವಾದನ ಹಾಗು ಸಂಗೀತ ಕಾರ್ಯಕ್ರಮಗಳೊಂದಿಗೆ ಶಿಬಿರ ಸಂಪನ್ನಗೊಳ್ಳಲಿದೆ. ಶಿಬಿರದಲ್ಲಿ ಖ್ಯಾತ ಸಂಗೀತ ದಿಗ್ಗಜರಾದ ಟಿ.ವಿ.ರಾಮಪ್ರಸಾದ್, ವಿಠ್ಠಲ್ ರಂಗನ್, ಎಂ.ಎಸ್. ವರದನ್, ಪಯ್ಯನೂರು ಗೋವಿಂದಪ್ರಸಾದ್, ವೈ.ಜಿ.ಶ್ರೀಲತಾ, ನಿಕ್ಷಿತ್ ಪೂತ್ತೂರ್, ಅಭಿಷೇಕ್ ರಘುರಾಂ, ಸುಂದರ ಕುಮಾರ್, ಎಚ್ ಏನ್.ಭಾಸ್ಕರ್, ಹನುಮಂತಪುರಂ ಭೂವರಾಹಂ, ವಿ.ವಿ.ರಮಣಮೂರ್ತಿ ತಮ್ಮ ಸಂಗೀತ ಕಾರ್ಯಕ್ರಮದ ಮೂಲಕ ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನಡೆಸಲಿದ್ದಾರೆ.

ಸಂಗೀತಾಸಕ್ತರು ಹಾಗು ವಿದ್ಯಾರ್ಥಿಗಳು ಸಂಗೀತ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಿಬಿರದ ಸಂಯೋಜಕ ಕರುಂಬಿತ್ತಿಲ್ ಮನೆಯ ವಿದ್ವಾನ್ ವಿಠ್ಠಲ ರಾಮಮೂರ್ತಿ ಮತ್ತು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!