ಇಚ್ಲಂಪಾಡಿ :ದೇಶ ಸೇವೆ ಮುಗಿಸಿ ತಾಯ್ನಾಡಿಗೆ ಆಗಮಿಸಿದ ಯೋಧನಿಗೆ ಅದ್ದೂರಿ ಸ್ವಾಗತ

ಶೇರ್ ಮಾಡಿ

ಭಾರತೀಯ ಸೇನೆಯಲ್ಲಿ 28 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಸುಬೇದಾರ್ ಮಧುಕುಮಾರ್‌ಗೆ ಕಳೆದ ಭಾನುವಾರ ಇಚ್ಲಂಪಾಡಿಯ ಶ್ರೀ ಸಿದ್ದಿ ವಿನಾಯಕ ಭಜನಾ ಮಂದಿರದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.ಅದ್ದೂರಿ ಸ್ವಾಗತವನ್ನು ಕಂಡು ಮಧುಕುಮಾರ್ ಆನಂದಭಾಷ್ಪ ಸುರಿಸಿದರು.

ಇಚ್ಲಂಪಾಡಿಯ ಶ್ರೀ ಸಿದ್ದಿ ವಿನಾಯಕ ಭಜನಾ ಮಂದಿರದಿಂದ ತೆರೆದ ವಾಹನದಲ್ಲಿ ನಿವೃತ್ತ ಯೋಧನನ್ನು ರಾಜ್ಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಗೆಳೆಯರು, ಅಭಿಮಾನಿಗಳು, ವಿವಿಧ ಸಮಾಜದ ಮುಖಂಡರು, ಸಮಸ್ತ ಆಟೋ ಚಾಲಕರು ಹಾಗೂ ಮಾಲಕರು, ವ್ಯಾಪಾರಸ್ಥರು ರಸ್ತೆಯುದ್ದಕ್ಕೂ ನಿವೃತ್ತ ಯೋಧನ ಮೇಲೆ ಹೂವಿನ ಸುರಿಮಳೆಗೈದು ವಂದೇ ಮಾತರಂ, ಭಾರತ್‌ ಮಾತಾ ಕೀ ಜೈ, ವೀರ ಯೋಧ ಸುಬೇದಾರ್ ಮಧುಕುಮಾರ್‌ಗೆ ಜಯವಾಗಲಿ ಎಂಬ ಜಯ ಘೋಷಣೆ ಕೂಗಿದರು.

ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬರ ಮಾಡಿಕೊಂಡ ಯೋಧನಿಗೆ ರಸ್ತೆ ಅಕ್ಕಪಕ್ಕ ನಿಂತ ಜನರು ಯೋಧನ ಸತತ 28 ವರ್ಷಗಳ ಸೇವೆಗೆ ಅಭಿನಂದನೆ ಸಲ್ಲಿಸಿದರು. ನಂತರ ಶ್ರೀ ಸಿದ್ದಿ ವಿನಾಯಕ ಭಜನಾ ಮಂದಿರದಲ್ಲಿ ನಿವೃತ್ತ ಯೋಧ ಸುಬೇದಾರ್ ಮಧುಕುಮಾರ್‌ಗೆ ಸನ್ಮಾನ ಮಾಡಿ ಗೌರವಿಸಲಾಯಿತು.ಆ ಬಳಿಕ ಮಧು ಕುಮಾರ್ ಮಾತನಾಡಿ ಯೋಧರಿಗೆ ಸಾರ್ವಜನಿಕರು ನೀಡುವ ಗೌರವವನ್ನು ನೋಡಿದರೆ ಸೈನಿಕ ಸೇವೆ ಬಗ್ಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ. ಮುಂದಿನ ಜನ್ಮ ಏನಾದರೂ ಇದ್ದರೆ ಯೋಧನಾಗಿ ದೇಶ ಸೇವೆ ಸಲ್ಲಿಸುವ ಆಸೆ ಇದೆ ಎಂದರು.ತನ್ನ ಕುಟುಂಬಲ್ಲಿ 8 ಮಂದಿ ಸೈನಿಕ ವೃತ್ತಿ ಮಾಡಿರುವುದಾಗಿ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ‌ ಎಂದರು.

ತಮ್ಮ ಹುಟ್ಟೂರಾದ ಇಚ್ಲಂಪಾಡಿಯ ಬಗ್ಗೆ ಮಾತಾಡಿ ನಮ್ಮ ಊರು ಒಂದು ಸರ್ವ ಧರ್ಮೀಯರ ಗೌರವದ ನಾಡಾಗಿದೆ ,ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ,ದೇಶ ಸೇವೆ ಮುಗಿಸಿದ ನಾನು ಇನ್ನು ಮುಂದೆ ಒಳ್ಳೆಯ ಸಮಾಜ ಸೇವಕನಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದರು .ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿ ದೇಶಸೇವೆ ಮಾಡಿ ಎಂದು ಕರೆಕೊಟ್ಟರು

ಮಾನಸ ಅವರಿಂದ ಪ್ರಾರ್ಥನೆ ,ಶ್ರೀನಿವಾಸ ಪೂಜಾರಿಯವರಿಂದ ಸ್ವಾಗತ ಭಾಷಣ, ಆದಿರಾ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು .ಶ್ರೀಜಾ ಸಂದೀಪ್ ಧನ್ಯವಾದ ಸಮರ್ಪಿಸಿದರು.ವೇದಿಕೆಯಲ್ಲಿ ಭಾಸ್ಕರ ಯಸ್ ಗೌಡ ,ಕೆ. ಟಿ .ವಲ್ಸಮ್ಮ ,ಕೇಶವ ಅಲೆಕ್ಕಿ ,ಡೈಸಿ ವರ್ಗೀಸ್ ,ದಿನೇಶ್ ಕುಮಾರ್ ,ರೋಯಿ ಟಿ .ಎಂ ,ನಾರಾಯಣ ಪಿಳ್ಳೈ ಮತ್ತು ಮಾಜಿ ಸೈನಿಕರು ಉಪಸ್ಥಿತರಿದ್ದರು. ಯೋಧನ ಸೋದರ ಮಾವ ವಿನೋದ್ ಕುಮಾರ್ ಮಾನಡ್ಕ ಕಾರ್ಯಕ್ರಮ ಆಯೋಜಿಸಿದ್ದರು.

ಆ ಬಳಿಕ ತೆರೆದ ವಾಹನದಲ್ಲಿ ನಿವೃತ್ತ ಯೋಧನನ್ನು ಶ್ರೀ ಗಂಗಾಧರೇಶ್ವರ ದೇವಸ್ಥಾನ ಸಮೀಪದ ಯೋಧನ ನಿವಾಸದಲ್ಲಿ ಸಂಬಧಿಕರು ಸ್ವಾಗತಿಸಿ ಬರಮಾಡಿಕೊಂಡರು.

ಕಳೆದ 28ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಯೋಧರಾಗಿ ಸಲ್ಲಿಸುತ್ತಿರುವ ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಸುಭೇದಾರ್ ಮಧು ಕುಮಾರ್ ಅವರು ಎ.30ರಂದು ನಿವೃತ್ತರಾಗಿದ್ದಾರೆ.26-04-1996ರಂದು ಭೂ ಸೇನೆಗೆ ಸೇರಿದ್ದ ಮಧುಕುಮಾರ್ ಅವರು ಬೆಂಗಳೂರಿನ ಸೇನಾ ವಿಭಾಗದಲ್ಲಿ ತರಬೇತಿ ಮುಗಿಸಿ 1998ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಆ ಬಳಿಕ ರಾಜಸ್ತಾನ, ಅಸ್ಸಾಂ, ಜಮ್ಮು ಕಾಶ್ಮೀರ, ಮೀರತ್, ಸಿಕಂದರಾಬಾದ್, ಲೇಹ್-ಲಡಾಖ್, ಪಶ್ಚಿಮ ಬಂಗಾಳ ಹಾಗೂ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. 11ನೇ ರಾಷ್ಟ್ರೀಯ ರೈಫಲ್ಸ್, Special Frontier Force ಹಾಗು Public relation office (Ministry of Defence)ಗುವಾಹಟಿಯಲ್ಲೂ ವಿಶೇಷ ಸೇವೆ ಸಲ್ಲಿಸಿದ್ದಾರೆ. 1999ರ ಕಾರ್ಗಿಲ್ ಯುದ್ಧದ ವೇಳೆಯಲ್ಲಿ(6 Mountain Division, Sonamarg) ಶ್ರೀನಗರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2017ರಲ್ಲಿ ಜೂನಿಯರ್ ಕಮಿಷನರ್ ಆಫೀಸರ್(JCO) ಆಗಿ ಪದೋನ್ನತಿ ಪಡೆದುಕೊಂಡಿದ್ದರು.

ಇವರು ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ನಿವೃತ್ತ ಸೈನಿಕ ದಿ.ಗೋಪಿನಾಥನ್ ನಾಯರ್ ಹಾಗೂ ಲಕ್ಷ್ಮಿ ಕುಟ್ಟಿ ದಂಪತಿಯ ಪುತ್ರ. ಇವರ ಸಹೋದರ ಮನೋಜ್ ಕುಮಾರ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇನ್ನೋರ್ವ ಸಹೋದರ ಮಹೇಶ್‌ಕುಮಾರ್ ಕೃಷಿಕರಾಗಿದ್ದಾರೆ. ಮಧುಕುಮಾರ್ ಅವರ ಪತ್ನಿ ಸುಷ್ಮಾ ಶಿವಮೊಗ್ಗ ಆನಂದಪುರ ಸರಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿದ್ದಾರೆ. ಪುತ್ರಿಯರಾದ ಸಮನ್ವಿ, ಮನಸ್ವಿ ವ್ಯಾಸಂಗ ಮಾಡುತ್ತಿದ್ದಾರೆ.

Leave a Reply

error: Content is protected !!