ಕೊಕ್ಕಡ: ಕಾಡುಪ್ರಾಣಿಗಳ ಬೇಟೆಯಾಡುತ್ತಿದ್ದ ಆರೋಪದಲ್ಲಿ ಉಪ್ಪಿನಂಗಡಿ ಅರಣ್ಯ ಇಲಾಖಾಧಿಕಾರಿಗಳ ತಂಡ ಮೂವರು ಆರೋಪಿಗಳನ್ನು ಬಂಧಿಸಿ, ಬೇಟೆಯಾಡಲು ಉಪಯೋಗಿಸುತ್ತಿದ್ದ ಗನ್ ಹಾಗೂ ಮಾರುತಿ ಓಮ್ನಿ ಕಾರು ವಶಪಡಿಸಿಕೊಂಡಿರುವ ಘಟನೆ ಶಿಬಾಜೆ ಗ್ರಾಮದಲ್ಲಿ ನಡೆದಿದೆ.
ಶಿಬಾಜೆ ಗ್ರಾಮದ ಕುರುಂಬು ನಿವಾಸಿ ಸೇಸಪ್ಪ ಪೂಜಾರಿ ಅವರ ಪುತ್ರ ಹರೀಶ್ (44ವ.), ಸಕಲೇಶಪುರ ಕೌಡಳ್ಳಿ ನಿವಾಸಿ ಜನಾರ್ದನ ಅವರ ಪುತ್ರ ಶಿವಕುಮಾರ್ (33ವ.) ಹಾಗೂ ಶಿಬಾಜೆ ಗ್ರಾಮದ ಪತ್ತಿಮಾರ್ ತನಿಯಪ್ಪ ಗೌಡ ಅವರ ಪುತ್ರ ಪದ್ಮನಾಭ(53ವ.) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಮೇ 23ರಂದು ಬೆಳಗ್ಗಿನ ಜಾವ 2 ಗಂಟೆ ವೇಳೆಗೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ-ಕಲ್ಲಾಜೆ ರಸ್ತೆಯ ಪತ್ತಿಮಾರ್ ಎಂಬಲ್ಲಿ ಶಿರಾಡಿ-ಶಿಶಿಲ ವಿಸ್ತರಣೆ ಬ್ಲಾಕ್ ಮೀಸಲು ಅರಣ್ಯ-4ರಲ್ಲಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ವೇಳೆ ಉಪ್ಪಿನಂಗಡಿ ಅರಣ್ಯ ಇಲಾಖಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಬೇಟೆಯಾಡಲು ಬಳಸುತ್ತಿದ್ದ 1 ಎಸ್‌ಬಿಬಿಎಲ್ ಗನ್ ಹಾಗೂ ಮಾರುತಿ ಓಮ್ನಿ ವಾಹನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ.ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಅವಿನಾಶ್, ಶಿವಕುಮಾರ್ ಹೊಸ್ಮನಿ, ರವೀಂದ್ರ, ಬೀಟ್ ಫಾರೆಸ್ಟ್ ನಿಂಗಪ್ಪ ಅವರಿ, ಚಾಲಕ ಕಿಶೋರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.