ಬೆಳ್ತಂಗಡಿ: ಶಿಕ್ಷಣವೇ ಇಂದು ಮುಖ್ಯವಾಗಿದ್ದು, ಅದಕ್ಕೆ ಪೂರಕವಾಗಿ ಪುಸ್ತಕಗಳ ಉಚಿತ ವಿತರಣೆಯನ್ನು ಕಳೆದ ಇಪ್ಪತ್ತು ವರ್ಷಗಳಿಂದ ಅಜಿಲ ಸೀಮೆಯಲ್ಲಿ ನಡೆಯುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ವತಿಯಿಂದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಹಯೋಗದಲ್ಲಿ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ಆದಿತ್ಯವಾರ ನಡೆದ ಗ್ರಾಮೀಣ ವಿದ್ಯಾರ್ಥಿಗಳಿಗೆ 20 ನೇ ವರ್ಷದ ಪುಸ್ತಕಗಳ ಉಚಿತ ವಿತರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವದಿಸಿದರು.
ವಿದ್ಯಾರ್ಥಿಗಳ ವಿದ್ಯಾಭ್ಯಾಸವು ಯಾವುದೇ ಕೊರತೆಯಿಂದ ನಿಲ್ಲಬಾರದು ಎಂಬ ಉದ್ದೇಶ ಇಂತಹ ಕಾರ್ಯಕ್ರಮಗಳ ಹಿಂದೆ ಇದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 40 ಸಾವಿರ ವಿದ್ಯಾರ್ಥಿಗಳಿಗೆ 25 ಕೋಟಿ ರೂ. ಗಳ ಸುಜ್ಞಾನ ನಿಧಿ ಎಂಬ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅಧ್ಯಾಪಕರ ಕೊರತೆಯಿರುವ ಶಾಲೆಗಳಿಗೆ 1000 ಶಿಕ್ಷಕರನ್ನು ಜ್ಞಾನದೀಪ ಯೋಜನೆಯಡಿ ನೇಮಿಸಲಾಗಿದೆ ಈ ಎಲ್ಲಾ ಕಾರ್ಯಗಳ ಹಿಂದೆ ಮಾನವೀಯತೆಯ ಉದ್ದೇಶ ಅಡಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಚಲನಚಿತ್ರ ನಟ ಸಿರಿ ಬ್ರ್ಯಾಂಡ್ ರಾಯಭಾರಿ ರಮೇಶ್ ಅರವಿಂದ್ ಅವರು, ನನ್ನಿಂದ ಆಗಿಯೇ ಆಗುತ್ತದೆ ಎಂಬ ಮನೋಭಾವ ನಮ್ಮಲ್ಲಿದ್ದರೆ ನಮ್ಮ ಜೀವನ ಶ್ರೇಷ್ಠವಾಗುತ್ತದೆ. ನಮ್ಮನ್ನು ನಾವು ಕೀಳು ಎಂದುಕೊಳ್ಳಬಾರದು. ಎಲ್ಲಾ ಅರ್ಹತೆ ನನಗಿದೆ ಎಂಬ ಭಾವದೊಂದಿಗಿದ್ದರೆ ನಮ್ಮ ಜೀವನ ಕರಪತ್ರ ಆಗದೆ ಮಹಾಗ್ರಂಥವಾಗುವುದರಲ್ಲಿ ನಿಸ್ಸಂಶಯ ಎಂದರು.
ನಾವು ಜೀವನದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದರೆ ಅದರಿಂದ ನೂರಾರು ಒಳ್ಳೆಯ ಸಂಗತಿಗಳು ಹೊರಬರುತ್ತವೆ. ಅಪ್ರತಿಮರು, ಸಾಧಕರು ನಮ್ಮ ಅಕ್ಕಪಕ್ಕದಲ್ಲೇ, ನಮ್ಮ ಮನೆಯಲ್ಲೇ ಇರುತ್ತಾರೆ. ಅವರನ್ನು ಗೌರವಿಸುವ ಕೆಲಸ ಮಾಡೋಣ. ಜೀವನವನ್ನು ಸಂತೋಷದಿಂದ ಕಳೆಯಬೇಕೆಂದಿದ್ದರೆ ನಾವು ಮಾಡುವ ಕೆಲಸ ಅರ್ಥಪೂರ್ಣವಾಗಿರಬೇಕು, ಉತ್ತಮ ನಿದ್ದೆ ಮಾಡಬೇಕು ಹಾಗೂ ಕೌಟುಂಬಿಕ ಸಂಬಂಧಗಳನ್ನು ಕಾಪಾಡಿಕೊಂಡು ಬರಬೇಕು ಎಂಬ ಸಲಹೆ ನೀಡಿದರಲ್ಲದೆ ನಮ್ಮ ಚಿಂತನೆ ಯೋಗ್ಯವಾಗಿರಲಿ, ಸಮಯದ ಸದುಪಯೋಗವಾಗುತ್ತಿರಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಅವರು, ಕಳೆದ 20 ವರ್ಷಗಳಿಂದ ಅಳದಂಗಡಿ ಸುತ್ತಲಿನ ಮಕ್ಕಳಿಗೆ ದೈವಸ್ಥಾನದ ಪ್ರಸಾದ ರೂಪವಾಗಿ ಪುಸ್ತಕಗಳನ್ನು ನೀಡಲಾಗುತ್ತಿದೆ. 200 ಮಕ್ಕಳಿಂದ ಆರಂಭವಾದ ಕಾರ್ಯ ಇಂದು 6000 ಮಕ್ಕಳು ಇದರ ಸದುಪಯೋಗಪಡೆದುಕೊಳ್ಳುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು. ವೇದಿಕೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ನಡಕ್ಕರ, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೆಂದ್ರ ಹೆಗ್ಗಡೆ ಕೊಕ್ರಾಡಿ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಉಪಸ್ಥಿತರಿದ್ದರು.
ನಿವೃತ್ತ ಯೋಧರಾದ ಗಣೇಶ್ ಲಾಯಿಲ, ಸಂಜೀವ ಕುಲಾಲ್ ಹಾಗೂ ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೂರಜ್ ಸುಲ್ಕೇರಿ ಮೊಗ್ರು ಅವರನ್ನು ಹಾಗೂ ವಿಶೇಷ ಸಾಧಕಿ ಸಬಿತಾ ಮೋನಿಸ್ ಗರ್ಡಾಡಿ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ ಎರಡನೇ ರೇಂಕ್ ಪಡೆದ ಚಿನ್ಮಯ್ ಅವರನ್ನು ಡಾ|ಹೆಗ್ಗಡೆಯವರು ಸಮ್ಮಾನಿಸಿದರು.
ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಜನಾರ್ದನ ಅವರು ಪ್ರಸ್ತಾವಿಸಿ ರಮೇಶ್ ಅರವಿಂದ ಅವರನ್ನು ಪರಿಚಯಿಸಿದರು. ಪ್ರಜ್ಞಾ ಕುಲಾಲ್ ಸಮ್ಮಾನ ಪತ್ರ ವಾಚಿಸಿದರು. ನಿತ್ಯಾನಂದ ಶೆಟ್ಟಿ ನೊಚ್ಚ ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ, ವಿಜಯಕುಮಾರ್ ನಾವರ, ಮೋಹನದಾಸ ಕಾರ್ಯಕ್ರಮ ನಿರ್ವಹಿಸಿದರು.