ಉಪ್ಪಿನಂಗಡಿ: ಹಿರೇಬಂಡಾಡಿ-ಕೊಯಿಲ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಹಾದು ಹೋಗುವ ರಾಮನಗರ ಪರಿಸರದಲ್ಲಿ ಮನೆಯೊಂದರ ಆವರಣ ಗೋಡೆ ಕುಸಿದು ರಸ್ತೆಗೆ ಬಿದ್ದಿದೆ.
ರಾಮನಗರ ನಿವಾಸಿ ಯು.ಟಿ.ಜಮೀಳಾ ಎಂಬುವರ ಜಾಗ ರಸ್ತೆಯ ಬದಿ ಇದ್ದು, ಹೆದ್ದಾರಿ ಕಾಮಗಾರಿ ನಡೆಸುವವರು ಆವರಣ ಗೋಡೆಯ ಅಡಿ ಭಾಗದಿಂದ ಮಣ್ಣು ತೆಗೆದಿದ್ದು, ಅದನ್ನು ಹಾಗೆ ಬಿಟ್ಟಿದ್ದರು.
3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣ ಗೋಡೆ ಕುಸಿದು ಬಿದ್ದಿದೆ. ಅವರ ತೋಟದ ಬಳಿ ಹೆದ್ದಾರಿಗೆ ಅಡ್ಡಲಾಗಿ ಮೋರಿ ಅಳವಡಿಸಿ ಆ ಭಾಗದ ನೀರನ್ನು ಅವರ ತೋಟಕ್ಕೆ ಬಿಡಲಾಗಿದ್ದು, ಇದರಿಂದಾಗಿ ಕೃಷಿ ನಾಶಕ್ಕೂ ಕಾರಣವಾಗಿದೆ.
ಇದೇ ರಸ್ತೆ ಬದಿಯಲ್ಲಿ 4 ಕಡೆ ಆವರಣ ಗೋಡೆ ಕುಸಿಯುವ ಹಂತದಲ್ಲಿದೆ. ಉಪ್ಪಿನಂಗಡಿಯ ಶಾಲೆ, ಕಾಲೇಜಿಗೆ ಹೋಗುವ ಈ ಭಾಗದ ಮಕ್ಕಳು, ಸಾರ್ವಜನಿಕರು ಈ ಮಾರ್ಗದ ಮೂಲಕ ನಡೆದುಕೊಂಡು ಹೋಗುತ್ತಿದ್ದು ಅವರಲ್ಲಿ ಆತಂಕ ಉಂಟಾಗಿದೆ.