ನೇಸರ ಫೆ.16:ಚೆಂಬೆಳಕಿನ ಖ್ಯಾತಿಯ ಹಿರಿಯ ಕವಿ,ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದ ನಾಡೋಜ ಚೆನ್ನವೀರ ಕಣವಿ ಬುಧವಾರ ಬೆಳಗ್ಗೆ ನಿಧನ ಹೊಂದಿದ್ದಾರೆ . ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ನಾಡೋಜ ಚೆನ್ನವೀರ ಕಣವಿ (93), ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದಾಗಿ ಜನವರಿ 14ರಿಂದ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ನಾಡೋಜ ಚೆನ್ನವೀರ ಕಣವಿ ದಾಖಲಾಗಿ, ಪಡೆಯುತ್ತಿದ್ದರು. ನಿನ್ನೆ ಅವರ ಸ್ಥಿತಿ ಗಂಭೀರಗೊಂಡಿರೋದಾಗಿ ತಿಳಿಸಲಾಗಿತ್ತು. ಈ ಬಳಿಕ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಬೆಳಿಗ್ಗೆ 9. 15ಕ್ಕೆ ನಿಧನರಾಗಿದ್ದಾರೆ.
ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ಎಂದು ಪ್ರಸಿದ್ಧಿರಾಗಿದ್ದ ಡಾ.ಚೆನ್ನವೀರ ಕಣವಿ ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು.ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ಧಾರವಾಡದಲ್ಲೇ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿ ಕಣವಿ 1952ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. 1956ರಲ್ಲಿ ಅದೇ ವಿಭಾಗದ ನಿರ್ದೇಶಕರಾಗಿ 1983ರವರೆಗೆ ಸೇವೆ ಸಲ್ಲಿಸಿದರು.ನಾಡಿನ ಅಪೂರ್ವ ಸಾಹಿತಿಗಳಲ್ಲಿ ಒಬ್ಬರಾದ ಚೆಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ ಹೊಸಗನ್ನಡ ಕಾವ್ಯದ 2ನೇ ತಲೆಮಾರಿನ ಕವಿ. ಪ್ರಕೃತಿಲೀಲೆ, ಪ್ರಣಯ, ದಾಂಪತ್ಯ, ವಾತ್ಸಲ್ಯದಂತಹ ರಮ್ಯ ಪರಂಪರೆಯ ನವ್ಯ ವಿಷಯಗಳು ಅವರ ಕೃತಿಗಳಲ್ಲಿವೆ.ಕವಿಗಳಾದ ದ.ರಾ. ಬೇಂದ್ರೆ, ಕುವೆಂಪು ಹೀಗೆ ಮೊದಲಾದವರು ಹೊಸಗನ್ನಡ ಕಾವ್ಯದ ಜತೆಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಸಮೃದ್ಧವಾಗಿ ಬೆಳೆಸಿದರು. ಇವರು ಸಿದ್ಧಪಡಿಸಿದ ಮಾದರಿಗಳನ್ನು ಆಸ್ಥೆಯಿಂದ ನೋಡುತ್ತ ಬೆಳೆದ ಕಣವಿ ಧಾರವಾಡದ ಸಂಸ್ಕೃತಿಯ ಗುಣಗಳನ್ನು ಅಳವಡಿಸಿಕೊಂಡು ಬೆಳೆದವರು.
ಚೆನ್ನವೀರ ಕಣವಿಯವರು ವಿಮರ್ಶೆಯನ್ನು ಬರೆದಿದ್ದರಾದರೂ ಪ್ರಧಾನವಾಗಿ ಅವರು ಕವಿಯಾಗಿದ್ದರು. ಚೆನ್ನವೀರ ಕಣವಿಯವರು ಕವಿಯಾಗಿ ಪ್ರಕಟವಾಗಿದ್ದು ನವೋದಯದ ‘ನಡುಹಗಲ’ ಕಾಲದಲ್ಲಿ. ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯ ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲ ಅದು.
ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂಥ ಪ್ರಭಾವಗಳ ನೆಲೆಯನ್ನು ಗುರುತಿಸಬಹುದಾಗಿದ್ದು, ಅವರ ಕಾವ್ಯದಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ. 1949ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ’, 1950ರಲ್ಲಿ ಪ್ರಕಟವಾದ ‘ಭಾವಜೀವಿ’ ಸಂಗ್ರಹಗಳಲ್ಲಿ ಈ ಎಲ್ಲ ಅಂಶಗಳನ್ನೂ ಗುರುತಿಸಬಹುದು. ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಕಣವಿಯವರ ಕವನಗಳನ್ನು ನೋಡಿ ಡಿವಿಜಿ ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದರು. ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ, ಹೂವು ಹೊರಳುವುವು ಸೂರ್ಯನ ಕಡೆಗೆ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಇವು ಕಣವಿಯವರ ಕೆಲವೊಂದು ಜನಪ್ರಿಯ ಕಾವ್ಯಗಳಾಗಿವೆ.
ಕಾವ್ಯಸಂಕಲನ
ಕಾವ್ಯಾಕ್ಷಿ
ಭಾವಜೀವಿ
ಆಕಾಶಬುಟ್ಟಿ
ಮಧುಚಂದ್ರ
ಮಣ್ಣಿನ ಮೆರವಣಿಗೆ
ದಾರಿ ದೀಪ
ನೆಲ ಮುಗಿಲು
ಎರಡು ದಡ
ನಗರದಲ್ಲಿ ನೆರಳು
ಜೀವಧ್ವನಿ
ಕಾರ್ತೀಕದ ಮೋಡ
ಜೀನಿಯಾ
ಹೊಂಬೆಳಕು
ಶಿಶಿರದಲ್ಲಿ ಬಂದ ಸ್ನೇಹಿತ
ಚಿರಂತನ ದಾಹ(ಆಯ್ದ ಕವನಗಳು)
ಹೂವು ಹೊರಳುವವು ಸೂರ್ಯನ ಕಡೆಗೆ
ಚೆಲುವಾದ ಸುನೀತಗಳು
ಸಾನೆಟ್ಟಿನ ಕಾವ್ಯಬಂಧ ಕಣವಿ ಅವರಿಗೆ ಪ್ರಿಯವಾದುದು. ‘ಕಾವ್ಯರಚನೆಯ ಪ್ರಾರಂಭದಿಂದಲೂ ನನ್ನ ಮನಸ್ಸನ್ನಾಕರ್ಷಿಸಿದ ಕಾವ್ಯ ಪ್ರಕಾರ ಸಾನೆಟ್’ ಎಂದು ‘ಎರಡು ದಡ’ದ ಮುನ್ನುಡಿಯಲ್ಲಿ ಸ್ವತಃ ಕಣವಿ ಅವರೆ ಹೇಳಿಕೊಂಡಿದ್ದಾರೆ. ಕಣವಿಯವರು ತಮ್ಮ ತತ್ವಜ್ಞಾನವನ್ನೆಲ್ಲಾ, ಜೀವನದ ಮೇಲಿದ್ದ ತಮ್ಮ ಭರವಸೆ ಯನ್ನೆಲ್ಲಾ ಈ ಸುನೀತದಲ್ಲಿ ಅತ್ಯಂತ ಪ್ರಭಾವಿಯಾಗಿ ಮಿಡಿಸಿದ್ದಾರೆ” ಎಂಬ ಶಾಂತಿನಾಥ ದೇಸಾಯಿಯವರ ಮಾತು ಇಲ್ಲಿ ಉಲ್ಲೇಖನೀಯ.
ಕಷ್ಟಸಾಧ್ಯವಾದ ಈ ಕಾವ್ಯಬಂಧವನ್ನು ವಶಪಡಿಸಿಕೊಂಡ ಕಣವಿ ಚೆಲುವಾದ ಅನೇಕ ಸುನೀತಗಳನ್ನು ರಚಿಸಿದ್ದಾರೆ. ಈ ದೃಷ್ಟಿ ಯಿಂದ ತಮ್ಮ ಸುನೀತಗಳ ಮೂಲಕ ಕಣವಿ, ಕನ್ನಡಕ್ಕೆ ಮಹತ್ವದ ಕಾವ್ಯಕಾಣಿಕೆಯನ್ನು ನೀಡಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು. ಶಾಂತಿನಾಥ ದೇಸಾಯಿ ಅವರು ಉಲ್ಲೇಖಿಸಿ ರುವ ಹಾಗೆ “ ಸ್ವಾತಂತ್ರ್ಯ ಸಂಗ್ರಾಮದಂಥ ಸಾರ್ವಜನಿಕ ವಿಷಯದ ಮೇಲೆ ಬರೆಯುವ ಪ್ರಸಂಗ ಬಂದಾಗಲಾಗಲಿ,ಗಾಂಧಿ, ಶಾಸ್ತ್ರಿ, ಶ್ರೀ ಅರವಿಂದರಂತಹ ಮಹಾತ್ಮರ ಬಗ್ಗೆ ಬರೆಯಬೇಕಾದಾಗಲಾಗಲಿ, ಇನ್ನೂ ಹತ್ತಿರದ ಹಿರಿಯರಾದ ಬೇಂದ್ರೆ, ಮುಗಳಿ, ತೀ.ನಂ.ಶ್ರೀ ಮುಂತಾದ ಆತ್ಮೀಯರ ಬಗ್ಗೆ ಬರೆಯುವ ಪ್ರಸಂಗ ಬಂದಾಗಲಾಗಲಿ ಕಣವಿಯವರಿಗೆ ಸಾನೆಟ್ಟು ಒಂದು ಅತ್ಯಂತ ಪ್ರಭಾವಿ ಯಾದ ಅಭಿವ್ಯಕ್ತಿ ಮಾಧ್ಯಮವಾಯಿತು.”
ವಿಮರ್ಶಾ ಕೃತಿಗಳು ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ ವಿಮರ್ಶಾತ್ಮಕ ಕೃತಿಗಳು
ಮಕ್ಕಳ ಕೃತಿ ಹಕ್ಕಿ ಪುಕ್ಕ ಮತ್ತು ಚಿಣ್ಣರ ಲೋಕವ ತೆರೆಯೋಣ ಕವನ ಸಂಕಲನ
ಪ್ರಶಸ್ತಿ ಮತ್ತು ಪುರಸ್ಕಾರಗಳು
1981ರಲ್ಲಿ ಜೀವಧ್ವನಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
1996ರಲ್ಲಿ ಹಾಸನದಲ್ಲಿ ನಡೆದ 65ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ
2008ರ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷತೆ
ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ
ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ, 2020ರಲ್ಲಿ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್