ನೆಲ್ಯಾಡಿ: ರಾಷ್ಟ್ರೀಯರ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಯಿಂದ ಇಚ್ಲಂಪಾಡಿಯಾಗಿ ಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆಯ ಬದಿಯಲ್ಲಿ ಕಿಡಿಗೇಡಿಗಳು ದಿನನಿತ್ಯ ಕಸವನ್ನು ಎಸೆದು ಹೋಗುವ ಕಾಯಕ ನಡೆಯುತ್ತಿದೆ.
ಈ ಪ್ರದೇಶದ ಇಕ್ಕೆಲಗಳಲ್ಲಿ ಮರಗಳಿದ್ದು ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಪ್ರದೇಶ ಇದಾಗಿದೆ. ದಿನನಿತ್ಯ ಇಲ್ಲಿ ಮನೆಗಳಲ್ಲಿ ನಡೆಯುವ ಸಮಾರಂಭಗಳ ಊಟದ ತಟ್ಟೆಗಳು, ಹಳೆಯ ಬಟ್ಟೆಗಳು, ಪ್ಲಾಸ್ಟಿಕ್ ವಸ್ತುಗಳು ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ತಂದು ಈ ಪ್ರದೇಶದಲ್ಲಿ ಸುರಿಯುವುದು ಕಿಡಿಗೇಡಿಗಳ ನಿತ್ಯ ಕಾಯಕವಾಗಿದೆ.
ಕಿಡಿಗೇಡಿಗಳು ಎಸೆಯುವ ವಸ್ತುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಇರುವುದರಿಂದ ಅರಣ್ಯ ಪ್ರದೇಶಕ್ಕೆ ತೊಂದರೆಯಾಗುವುದು ಅಲ್ಲದೆ ಕಾಡು ಪ್ರಾಣಿಗಳು ಆಹಾರದ ಆಸೆಗಾಗಿ ಪ್ಲಾಸ್ಟಿಕ್ ಗಳನ್ನು ತಿನ್ನುವುದರಿಂದ ಅವುಗಳ ಪ್ರಾಣಕ್ಕೂ ತೊಂದರೆ ಉಂಟಾಗುತ್ತಿದೆ ಹಾಗೂ ಪರಿಸರದ ಸುತ್ತ ದುರ್ನಾಥ ಬೀರುತ್ತಿದೆ, ಇದರಿಂದ ನಿತ್ಯ ಪ್ರಯಾಣಿಕರಿಗೂ ಹಾಗೂ ಯಾತ್ರಾತ್ರಿಗಳಿಗೂ ನರಕ ಯಾತನೆ ಉಂಟಾಗಿದೆ.
ಅರಣ್ಯ ಇಲಾಖೆಯ ನಾಮ ಫಲಕ ಲೆಕ್ಕಿಸಲೇ ಇಲ್ಲ!
ಪಂಜ ಅರಣ್ಯ ವಲಯಕ್ಕೆ ಸಂಬಂಧಪಟ್ಟ ಈ ಪ್ರದೇಶವಾಗಿದ್ದು ನೆಲ್ಯಾಡಿ ಶಾಖಾ ವಲಯದ ಮೂಲಕ “ಈ ಪ್ರದೇಶವು ಸೂಕ್ಷ್ಮ ಕಣ್ಗಾವಲಿನಲ್ಲಿ ಇರುತ್ತದೆ ಇಲ್ಲಿ ಯಾವುದೇ ತ್ಯಾಜ್ಯವನ್ನು ಎಸೆಯಬಾರದು, ಎಸೆಯುವವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು” ಎಂಬ ನಾಮಫಲಕವನ್ನು ಅಲ್ಲಲ್ಲಿ ಅಳವಡಿಸಲಾಗಿದ್ದರು ಇದನ್ನು ಲೆಕ್ಕಿಸದೆ ಕಿಡಿಗೇಡಿಗಳು ತಮ್ಮ ಕಾಯಕವನ್ನು ಮುಂದುವರಿಸುತ್ತಲೇ ಇದ್ದಾರೆ.
ಕೌಕ್ರಾಡಿ ಗ್ರಾಮ ಪಂಚಾಯಿತಿನ ವತಿಯಿಂದ ಈ ಪ್ರದೇಶದಲ್ಲಿ ಪದೇ ಪದೇ ಸ್ವಚ್ಛಗೊಳಿಸಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರು. ತ್ಯಾಜ್ಯ ಎಸೆಯುವವರ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಲೇ ಇದೆ.
ಪ್ರತಿ ಗ್ರಾಮ ಸಭೆಯಲ್ಲಿಯೂ ಈ ಬಗ್ಗೆ ಕಸ ಎಸೆಯದಂತೆ ತಿಳಿ ಹೇಳಲಾಗುತ್ತಿದ್ದರು ಯಾವುದೇ ಪ್ರಯೋಜನವಾಗಲಿಲ್ಲ. ಇದನ್ನು ಹತೋಟಿಗೆ ತರುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಸಾರ್ವಜನಿಕರು ಅಧಿಕಾರಿ ವರ್ಗದವರೊಂದಿಗೆ ಕೈ ಜೋಡಿಸಿ ಈ ಕೃತ್ಯ ನಡೆಸುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದಲ್ಲಿ ಮಾತ್ರ ಇದು ನಿಲ್ಲಿಸಲು ಸಾಧ್ಯ ಎಂದು ಎಲ್ಲರ ಅಭಿಪ್ರಾಯವಾಗಿದೆ.