ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಇತ್ತ ದರ್ಶನ್ ಪರ ಹಾಗೂ ವಿರೋಧದ ಬಗ್ಗೆ ಚರ್ಚೆ ನಡೆಯುತ್ತಿದೆ.
ಪವಿತ್ರಾ ಗೌಡ ಅವರಿಗೆ ಆಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕಾಗಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆತಂದು ಅಲ್ಲಿ ಶೆಡ್ ವೊಂದರಲ್ಲಿ ಹಲ್ಲೆ ಮಾಡಿ, ಕೊಲೆಗೈದು ಮೃತದೇಹವನ್ನು ಮೋರಿಗೆ ಎಸೆಯಲಾಗಿದೆ.
ಈ ಪ್ರಕರಣದಲ್ಲಿ ದರ್ಶನ್ ಎ1 ಆಗಿದ್ದು, 13 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇತ್ತ ಚಿತ್ರರಂಗ ಈ ಘಟನೆ ಬಗ್ಗೆ ಕೇಳಿ ಶಾಕ್ ಆಗಿದೆ. ಕೆಲ ಕಲಾವಿದರು ವಿಚಾರಣೆ ಪೂರ್ತಿ ಆಗಿ ದರ್ಶನ್ ಆದಷ್ಟು ಬೇಗ ಸಂಕಷ್ಟದಿಂದ ಪಾರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ನಟಿ ರಮ್ಯಾ ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕೆಂದು ಹೇಳಿರುವ ಪೋಸ್ಟ್ ವೊಂದನ್ನು ಹಂಚಿಕೊಂಡು, ತನ್ನ ಅಭಿಪ್ರಾಯವನ್ನೂ ಆ ಮೂಲಕ ವ್ಯಕ್ತಪಡಿಸಿದ್ದಾರೆ.
“ಸೆಕ್ಷನ್ 302 ರ ಅಡಿಯಲ್ಲಿ ಶಿಕ್ಷೆ ಸಾಬೀತಾದರೆ ದರ್ಶನ್ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಪಡೆಯುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಹಣ ಅಥವಾ ಇತರೆ ಅಂಶ ಪರಿಣಾಮ ಬೀರಬಾರದು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು” ಎಂದು ಹೇಳಿರುವ ಪೋಸ್ಟ್ ವೊಂದನ್ನು ʼಎಕ್ಸ್ʼ ನಲ್ಲಿ ರಮ್ಯಾ ರೀಟ್ವೀಟ್ ಮಾಡಿದ್ದಾರೆ.
ನಟಿ ರಮ್ಯಾ ಈ ಹಿಂದೆ ದರ್ಶನ್ ಅವರ ಮೇಲೆ ಚಪ್ಪಲಿ ಎಸೆತವಾದ ಪ್ರಕರಣದ ಸಂದರ್ಭದಲ್ಲೂ ಸ್ಪಂದಿಸಿದ್ದರು. ಫ್ಯಾನ್ಸ್ ಹಾಗೂ ಸ್ಟಾರ್ ಗಳಿಗೆ ಬುದ್ಧಿವಾದ ಹೇಳಬೇಕಾಗಿದೆ ಎಂದಿದ್ದರು.
ಸದ್ಯ ರಮ್ಯಾ ಅವರ ಈ ಟ್ವೀಟ್ ಗಮನ ಸೆಳೆದಿದ್ದು, ಕೆಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.