ಮಂಗಳೂರು ನಗರದ ಬೋಳಿಯಾರುವಿನಲ್ಲಿ ವಿಜಯೋತ್ಸವದ ಬಳಿಕ ನಡೆದ ಬಿಜೆಪಿ ಕಾರ್ಯಕರ್ತರಿಬ್ಬರ ಮೇಲೆ ನಡೆದ ಚೂರಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.
ಶಕೀರ್(28), ಅಬ್ದುಲ್ ರಜಾಕ್ (40), ಅಬೂಬಕ್ಕರ್ ಸಿದ್ದಿಕ್(35), ಸವಾದ್ (18) , ಅಬೂಬಕರ್ ಮತ್ತು ಮೋನು ಅಲಿಯಾಸ್ ಹಫೀಜ್ (24) ಬಂಧಿತ ಆರೋಪಿಗಳು ಎಂದು ಅವರು ತಿಳಿಸಿದ್ದಾರೆ.
ಸಿ.ಸಿ ಟಿವಿ ವಿಡಿಯೋ ಆಧಾರದಲ್ಲಿ 20 ಜನರನ್ನು ವಶಕ್ಕೆ ಪಡೆದಿದ್ದೆವು. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರು ಮಂದಿಯನ್ನು ಬಂಧಿಸಿದ್ದೇವೆ. ಇನ್ನುಳಿದವರ ಬಂಧನ ಪ್ರಕ್ರಿಯೆ ನಡೆಯುತ್ತಿದೆ. ಮೂರು ತಂಡದ ಮೂಲಕ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಮೆರವಣಿಗೆ ನಂತರ ಮೂರು ಮಂದಿ ಮಸೀದಿ ಮುಂದೆ ಘೋಷಣೆ ಕೂಗಿದ್ದಾರೆ. ನಂತರ ಅವರಿಗೆ ಹಲ್ಲೆ ನಡೆಸಲಾಗಿದೆ. ಆರೋಪಿಯಲ್ಲಿ ಒಬ್ಬ ರೌಡಿ ಶೀಟರ್ ಇದ್ದ, ಆತ ಚೂರಿ ಇಟ್ಟುಕೊಂಡಿದ್ದ. ಭಾರತ್ ಮಾತ ಕೀ ಜೈ ಎನ್ನುವ ಘೋಷಣೆಗೂ ಮೊದಲು ಬೇರೆ ಪ್ರಚೋದನಾಕಾರಿ ಘೋಷಣೆ ಕೂಗಿದ್ದರು ಎಂದರು.
ಮುಂದಿನ ದಿನಗಳಲ್ಲಿ ಎಲ್ಲಾ ಠಾಣೆಗಳಲ್ಲಿ ಶಾಂತಿ ಸಭೆ ನಡೆಸುತ್ತೇವೆ. ಎಲ್ಲ ಧರ್ಮದ ಪ್ರಮುಖರನ್ನು ಕರೆದು ಶಾಂತಿ ಸಭೆ ನಡೆಸುತ್ತೇವೆ. ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಿದ್ದೇವೆ ಎಂದು ಹೇಳಿದರು.
ರವಿವಾರ ಪ್ರಧಾನಿ ಮೋದಿಯವರ ಪದಗ್ರಹಣದ ಹಿನ್ನಲೆಯಲ್ಲಿ ವಿಜಯೋತ್ಸವ ನಡೆದಿತ್ತು. ಈ ವೇಳೆ ಮಸೀದಿಯ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರಚೋದನಕಾರಿ ಘೋಷಣೆ ಕೂಗಿದ್ದರು. ಇದರಿಂದ ಆಕ್ರೋಶಗೊಂಡ ಯುವಕರ ತಂಡ ಇಬ್ಬರಿಗೆ ಚೂರಿಯಿಂದ ಇರಿದಿದೆ. ರಾತ್ರಿ 9 ಗಂಟೆಗೆ ಚೂರಿ ಇರಿತದ ವಿಚಾರ ತಿಳಿಯುತ್ತಿದ್ದಂತೆ ಬೋಳಿಯಾರಿನಲ್ಲಿ ಎರಡೂ ಕೋಮಿನವರು ಸೇರಿದ್ದಾರೆ. ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದರು.
ಇದರ ಜೊತೆಗೆ ಬೋಳಿಯಾರು ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷ ಪಿ.ಕೆ ಅಬ್ದುಲ್ಲಾ ನೀಡಿರುವ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ಬಳಿಕ ಕೆಲವು ಕಾರ್ಯಕರ್ತರು ಮಸೀದಿ ಮುಂಭಾಗದಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದ್ದರು. ಆ ಮೂಲಕ ಅಲ್ಲಿದ್ದ ಮುಸ್ಲಿಂ ಕಾರ್ಯಕರ್ತರನ್ನು ಪ್ರಚೋದಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ ಎಂದರು.