ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಚಾರಣೆ ನಡೆಯಲಿದ್ದು, ಅಗತ್ಯವಿದ್ದರೆ ಬಂಧಿಸುವ ಬಗ್ಗೆ ಸಿಐಡಿ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೆ ಇರುವ ಮಾಹಿತಿ ಪ್ರಕಾರ, ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ಅವರು ಬಂದು ತಮ ಹೇಳಿಕೆ ದಾಖಲಿಸಬೇಕಿದೆ ಎಂದರು.
ಪ್ರಕರಣದಲ್ಲಿ 15ನೇ ತಾರೀಖಿನೊಳಗೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. ಅದಕ್ಕೂ ಮುನ್ನ ಅಗತ್ಯವಿರುವ ಪ್ರಕ್ರಿಯೆಗಳನ್ನು ಪಾಲಿಸಬೇಕಾಗುತ್ತದೆ. ಹೇಳಿಕೆ ಪಡೆಯುವುದು, ಹಾಜರುಪಡಿಸುವುದು ಸೇರಿದಂತೆ ಇತರ ಕ್ರಮಗಳಾಗುತ್ತವೆ ಎಂದು ಹೇಳಿದರು.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತನಿಖಾಧಿಕಾರಿಗಳು ಯಡಿಯೂರಪ್ಪ ಅವರನ್ನು ಬಂಧಿಸಬೇಕೋ? ಬೇಡವೋ? ಎಂಬ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಗತ್ಯವಿದ್ದರೆ ಬಂಧಿಸುತ್ತಾರೆ. ಈ ವಿಚಾರವಾಗಿ ನಾನು ಏನನ್ನೂ ಹೇಳುವುದಿಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ದರ್ಶನ್ ಪ್ರಕರಣದ ವರದಿ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಎಸಿಪಿ ಭರತರೆಡ್ಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು, ಒಂದು ವೇಳೆ ಹಲ್ಲೆ ಮಾಡಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಯಾರಾದರೂ ಲೋಪವೆಸಗಿದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ ಪರಮೇಶ್ವರ್, ತಪ್ಪುಗಳು ಕಂಡುಬಂದರೆ ಅಮಾನತುಗೊಳಿಸುವುದು, ವಿಚಾರಣೆ ನಡೆಸುವುದು, ಕೇಸು ದಾಖಲಿಸುವ ಕ್ರಮಗಳನ್ನು ನಿಯಮಾನುಸಾರ ಮಾಡಲಾಗುವುದು ಎಂದು ಕುಣಿಗಲ್‌ನಲ್ಲಿ ವರದಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದರು.
ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಆಂಧ್ರ ಪ್ರದೇಶದಲ್ಲಿ ಒಬ್ಬರನ್ನು ಬಂಧಿಸಿದ್ದಾರೆ. ಉಳಿದಂತೆ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.