ವಿದ್ಯಾರ್ಥಿಗಳು ವಾಟ್ಸಾಪ್, ಫೇಸ್ಬುಕ್ ಗಳ ಮಧ್ಯೆ ಒದ್ದಾಡುತ್ತಿದ್ದಾರೆ- ಜಾರ್ಜ್ ಟಿ. ಎಸ್

ಶೇರ್ ಮಾಡಿ

ನೆಲ್ಯಾಡಿ: ಏರುಪೇರುಗಳ ಮಧ್ಯೆ ಆರು ವರ್ಷಗಳಿಂದ ನೆಲ್ಯಾಡಿಗೆ ಮುಕುಟಮಣಿಯಾಗಿ ನೆಲ್ಯಾಡಿ ವಿವಿ ಕಾಲೇಜು ಬೆಳೆದು ನಿಂತಿದೆ. ಶಿಕ್ಷಣವೆಂದರೆ ಕೇವಲ ಅಂಕಿಗಳಿಸುವುದು ಮಾತ್ರವಲ್ಲ ಅದರ ಹೊರತಾಗಿ ಜೀವನೋಪಾಯ ಮಾರ್ಗವಾಗಿದೆ. ವಿದ್ಯಾರ್ಥಿಗಳು ಜೀವನ ಶಿಕ್ಷಣಕ್ಕಾಗಿ ಓದುತ್ತಿಲ್ಲ, ಪ್ರತಿಯೊಬ್ಬರಲ್ಲಿ ಗುರಿ, ಪ್ರಾಮಾಣಿಕತೆ, ಪ್ರಯತ್ನಗಳಿದ್ದಲ್ಲಿ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯ. ಇಂದಿನ ಶಿಕ್ಷಣ ವ್ಯವಸ್ಥೆಯು ಗೊಂದಲದ ಗೂಡಾಗಿ ಪರಿಣಮಿಸಿದೆ. ಭಾರತದ ಭವಿಷ್ಯದ ಶಿಲ್ಪಿಗಳು ವಿದ್ಯಾರ್ಥಿ ಸಮೂಹವಾಗಿದೆ. ಇಂದಿನ ವಿದ್ಯಾರ್ಥಿಗಳು ಮುಂದೆ ವಾಟ್ಸಾಪ್, ಹಿಂದೆ ಫೇಸ್ಬುಕ್ ಗಳ ಮಧ್ಯೆ ಒದ್ದಾಡುತ್ತಿದ್ದಾರೆ. ನಿರ್ದಿಷ್ಟವಾದ ಗುರಿ ಇಟ್ಟು ಮುಂದುವರಿದರೆ ಯಶಸ್ಸು ಖಂಡಿತ ದೊರೆಯುತ್ತದೆ ಎಂದು ಬೆಥನಿ ನೂಜಿಬಾಳ್ತಿಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಹೇಳಿದರು.

ನೆಲ್ಯಾಡಿ ವಿವಿ ಕಾಲೇಜಿನ ಆವರಣದಲ್ಲಿ ಜೂ.13ರಂದು ನಡೆದ ಆರನೇ ವರುಷದ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರತಿಭೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.

ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸಲಾಂ ಬಿಲಾಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೆಲ್ಯಾಡಿ ವಿವಿ ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಸಂಚಾಲಕರಾದ ಸುರೇಶ್.ಕೆ, ದೈಹಿಕ ಶಿಕ್ಷಕರಾದ ಪಾವನ ಕೃಷ್ಣ, ಲಲಿತಕಲಾ ಸಂಘದ ಸಂಚಾಲಕರಾದ ದಿವ್ಯಶ್ರೀ.ಜಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ ಶೆಟ್ಟಿ, ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ಆನಂದ.ಎ, ಕಾರ್ಯದರ್ಶಿ ಅಂಗು, ಕಾಲೇಜಿನ ಅನುಷ್ಠಾನ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್, ಕಾಲೇಜಿನ ಕಟ್ಟಡ ಮಾಲಕರಾದ ರವಿಚಂದ್ರ ಹೊಸವಕ್ಲು, ಸುಪ್ರೀತಾ ರವಿಚಂದ್ರ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಲಿಕೆ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನೂರಂದಪ್ಪ ಗತಕಾಲದ ವರದಿಯನ್ನು ಮಂಡಿಸಿದರು. ಲಲಿತಕಲಾ ಸಂಘದ ಸಂಚಾಲಕರಾದ ದಿವ್ಯಶ್ರೀ.ಜಿ ಸ್ವಾಗತಿಸಿದರು. ಉಪನ್ಯಾಸಕರಾದ ಸಚಿನ್ ಹಾಗೂ ಶೃತಿ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕರಾದ ಡಾ.ಸೀತಾರಾಮ.ಪಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಂಸ್ಕೃತಿ ಕಾರ್ಯಕ್ರಮ ನಡೆಯಿತು.

Leave a Reply

error: Content is protected !!