ಕೊಕ್ಕಡ: ನಿಮ್ಮ ಮಗ ರೇಪ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾನೆ ಎಂದು ಪೋಷಕರಿಗೆ ವಿದೇಶಿ ಕರೆ ಬಂದಿರುವ ಘಟನೆ ಜೂ.11ರಂದು ಪಟ್ರಮೆಯಲ್ಲಿ ನಡೆದಿದೆ. ಕಳೆದ ಮೂರಾಲ್ಕು ದಿನಗಳಿಂದ ಕರಾವಳಿಯ ಹಲವು ಮಂದಿಗೆ ಇಂತಹದೇ ರೀತಿಯ ಕರೆಗಳು ಬರುತ್ತಿದ್ದು, ಪೋಷಕರು ಆತಂಕಕ್ಕೆ ಒಳಗಾದ ಘಟನೆಗಳು ಸಂಭವಿಸಿವೆ.
ಧರ್ಮಸ್ಥಳದ ಪಟ್ರಮೆ ನಿವಾಸಿ ಸುನಿಲ್ ಮತ್ತು ಅನುಪಮಾ ಅವರ ಪುತ್ರ ಮಂಗಳೂರಿನಲ್ಲಿ ಕಾಲೇಜಿನಲ್ಲಿ ಓದುತ್ತಿದ್ದು ಜೂ.11ರಂದು ಬೆಳಗ್ಗೆ 10.30ರ ವೇಳೆಗೆ ಪೋಷಕರಿಗೆ ವಿದೇಶಿ ನಂಬರ್ +923092999529 ನಿಂದ ವಾಟ್ಸ್ ಆ್ಯಪ್ ಕರೆ ಬಂದಿತ್ತು.
ಮಗನ ಶಾಲಾ ದಾಖಲಾತಿಗಳಲ್ಲಿ ತಾಯಿಯ ನಂಬರ್ ನೀಡಲಾಗಿತ್ತು. ಅದೇ ಸಂಖ್ಯೆಗೆ ಫೋನ್ ಕರೆ ಬಂದಿತ್ತು. ಮಹಿಳೆ ಜತೆ ಮಾತನಾಡಿದ ವ್ಯಕ್ತಿ ತಂದೆಯ ಹೆಸರು ಹೇಳಿ ಬಳಿಕ ಮಗನ ಹೆಸರು ಹೇಳಿದರು. ನಿಮ್ಮ ಮಗ ರೇಪ್ ಕೇಸ್ ನಲ್ಲಿ ಸಿಕ್ಕಿ ಬಿದ್ದಿದ್ದಾನೆ. ರಾಜಿಗೆ ಬರುತ್ತಿರಾ? ಅಂತ ಕೇಳಿದನು. ವಿಚಾರ ತಿಳಿದು ಒಮ್ಮೆಗೆ ಆಘಾತಕ್ಕೊಳಗಾದ ತಾಯಿ ಧೃತಿಗೆಡದೆ ಕರೆಮಾಡಿದವರನ್ನು ಸರಿಯಾಗಿ ವಿಚಾರಿಸುವ ಪ್ರಯತ್ನ ಮಾಡಿದರು. ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಪತಿ ಕೂಡ ಅವರಲ್ಲಿ ಮಾತನಾಡಿದ್ದರು. ಇದು ನಕಲಿ ಕರೆ ಇರಬಹುದೆಂದು ಅದನ್ನು ಕಟ್ ಮಾಡಿದ ಬಳಿಕ ವಂಚಕರು ಮತ್ತೆ ಕರೆ ಮಾಡಿದರು.
ಆಗ ಆತ, ಪೊಲೀಸರ ಕರೆಯನ್ನೇ ಫ್ರಾಡ್ ಅಂತ ಹೇಳುವಷ್ಟು ಧೈರ್ಯವೇ ನಿಮಗೆ? ಎಂದು ಕೇಳಿದ್ದಾರಂತೆ. ಇಷ್ಟಕ್ಕೂ ಮಗ ಕಿಡ್ನಾಪ್ ಆಗಿದ್ದು ನಿಜಾನ ಅಂತ ನೋಡೋಕೆ ಮಗನಿಗೆ ಕಾಲ್ ಕೊಡುವಂತೆ ಪೋಷಕರು ತಿಳಿಸಿದರು. ಆಗ ಇವರ ಮಗ ಅಳುವ ಹಾಗೆ ಆ ಕಡೆಯಿಂದ ಅಳುವ ಧ್ವನಿ ಕೇಳಿಸಿತ್ತು. ಆಗ ಇದು ವಂಚಕರ ಕರೆ ಎಂಬುದನ್ನು ಅರಿತು ಅವರನ್ನೇ ತರಾಟೆಗೆ ತೆಗೆದುಕೊಂಡರು. ಅನಂತರ ಬೆಂಗಳೂರಿನಲ್ಲಿ ನಮ್ಮ ಸಂಬಂಧಿಕರು ಪೊಲೀಸ್ ಆಗಿದ್ದು, ಅವರಿಗೆ ನಿಮ್ಮ ಫೋನ್ ನಂಬರ್ ಕೊಡುತ್ತೇವೆ ಅವರು ಮಾತನಾಡುತ್ತಾರೆ ಎಂಬುದಾಗಿ ಹೇಳಿದಾಕ್ಷಣ ವಂಚಕರು ಕರೆ ಕಟ್ ಮಾಡಿದರು ಎಂದು ವಿವರಿಸಿದರು.
ಅವರ ಕರೆಯ ಪ್ರೊಫೈಲ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಫೋಟೋ ಹಾಕಿದ್ದರು.
ಬಳಿಕ ದಂಪತಿ ಕಾಲೇಜಿಗೆ ಕರೆ ಮಾಡಿ ಮಗ ಕ್ಷೇಮವಾಗಿರುವ ವಿಚಾರವನ್ನು ದೃಢಪಡಿಸಿಕೊಂಡರು. ಜೂ.11 ಮತ್ತು 12ರಂದು ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು ಮಂಗಳೂರು ನಗರದ ಸೈಬರ್‌ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿವೆ.
ಮಂಗಳೂರು ನಗರದ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಹಲವಾರು ವಿದ್ಯಾರ್ಥಿಗಳ ಪೋಷಕರಿಗೆ ಈ ರೀತಿಯ ಬೆದರಿಕೆಯ ಕರೆಗಳು ಬಂದಿವೆ. ಇದರಲ್ಲಿ ಹೆಚ್ಚಾಗಿ ಪೋಲಂಡ್ ಮತ್ತು ಪಾಕಿಸ್ಥಾನದಂತಹ ವಿದೇಶಿ ಸಂಖ್ಯೆಗಳನ್ನು ಹೊಂದಿದ್ದವು.
ಈ ಬಗ್ಗೆ ಸುನಿಲ್ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.