ಉದ್ಯಾವರ ಪಾಪನಾಶಿನಿ ಹೊಳೆಯ ರೈಲ್ವೇ ಟ್ರ್ಯಾಕ್‌ನ ಕಂಬದ ನಡುವೆ ರೈಲಿನಿಂದ ಬಿದ್ದು ಅಪರಿಚಿತ ಮಹಿಳೆಯೋರ್ವಳು ಮೃತ ಪಟ್ಟ ಘಟನೆ ಶುಕ್ರವಾರ ಸಂಜೆ ಬೆಳಕಿಗೆ ಬಂದಿದೆ.
ಬೆಳಗ್ಗಿನ ಜಾವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಭಾರತದ ಮೂಲದ ಮಹಿಳೆ ರೈಲಿನಿಂದ ಬಿದ್ದು ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರ ಬೇಕೆಂದು ಶಂಕಿಸಲಾಗಿದೆ.
ಮಹಿಳೆಯ ಮೃತ ದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು ಢಿಕ್ಕಿಯ ರಭಸಕ್ಕೆ ರೈಲ್ವೇ ಟ್ರ್ಯಾಕ್ ಮತ್ತು ಹೊಳೆಗೆ ಹಾಕಿರುವ ಬೃಹತ್ ಕಂಬದ ಬೀಮ್‌ನೊಳಗೆ ಹೋಗಿ ಬಿದ್ದಿದೆ.
ಸಂಪೂರ್ಣ ಅಪ್ಪಚ್ಚಿಯಾಗಿದ್ದ ಮಹಿಳೆಯ ಮೃತದೇಹವನ್ನು ಕಾಪು ಪೊಲೀಸರು ಮತ್ತು ರೈಲ್ವೇ ಪೊಲೀಸರ ಉಪಸ್ಥಿತಿಯಲ್ಲಿ ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬುಲೆನ್ಸ್ ಸಿಬಂದಿ ನಾಗರಾಜ್ ನೇತೃತ್ವದಲ್ಲಿ ಮೇಲಕ್ಕೆತ್ತಿ, ಉಡುಪಿ ಅಜ್ಜರಕಾಡು ಶವಾಗಾರಕ್ಕೆ ಸಾಗಿಸಲಾಗಿದೆ.
ಕಾಪು ಎಸ್ಸೈ ಅಬ್ದುಲ್ ಖಾದರ್ ಮತ್ತು ಸಿಬಂದಿಗಳು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸ್ ಠಾಣೆ ಸಂಪರ್ಕಿಸಲು ಮನವಿ
ಮೃತ ಮಹಿಳೆಯನ್ನು ಉತ್ತರ ಭಾರತ ಮೂಲದ ಕಾರ್ಮಿಕ ಮಹಿಳೆಯಾಗಿರಬೇಕೆಂದು ಸಂಶಯಿಸಲಾಗಿದೆ. ಕುತ್ತಿಗೆಯಲ್ಲಿ ತಾಳಿ ಸರ ಹೊಂದಿದ್ದ ಮಹಿಳೆ ನೈಟಿ ಧರಿಸಿದ್ದು ಪರ್ಸ್ ನಲ್ಲಿ 150 ರೂಪಾಯಿ ದೊರಕಿದೆ. ಮೃತ ದೇಹದ ವಾರೀಸುದಾರರು ಯಾರಾದರೂ ಇದ್ದಲ್ಲಿ ಕಾಪು ಪೊಲೀಸ್ ಠಾಣೆ ಅನ್ನು ಸಂಪರ್ಕಿಸುವಂತೆ ಪೊಲೀಸರು ವಿನಂತಿಸಿದ್ದಾರೆ.