ಮಾನವ ಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ. ದೇಶದ ಹಾಗೂ ಸಮುದಾಯದ ಅಭಿವೃದ್ದಿಯೊಂದಿಗೆ ವೈಯಕ್ತಿಕ ಉದ್ಧಾರವೂ ಮುಖ್ಯ. ಮಾನವೀಯ ಮೌಲ್ಯ ಅರಿಯುವುದರೊಂದಿಗೆ ನಾಯಕತ್ವ ಗುಣ, ಪ್ರತಿಭಾ ಅಭಿವ್ಯಕ್ತಿಗೆ, ಅಸಹಾಯಕರಿಗೆ ಸಹಾಯ ಇತ್ಯಾದಿ ಗುಣಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಪೋಷಕವಾಗಿದೆ. ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ. ಅಂತಹ ವ್ಯಕ್ತಿತ್ವ ವಿಕಸನಕ್ಕೆ ಈ ಯೋಜನೆ ಒಳ್ಳೆಯ ವೇದಿಕೆ. ಒಟ್ಟಾರೆ ರಾಷ್ಟ್ರೀಯ ಸೇವಾ ಯೋಜನೆಯಿಂದ ನಮ್ಮ ವ್ಯಕ್ತಿತ್ವದ ಉನ್ನತಿ ಸಾಧ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎ.ಕುಮಾರ ಹೆಗ್ಡೆ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಾಗೂ ಪ್ರತಿಜ್ಞಾ ವಿಧಿ ಬೋಧಿಸಿದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಸೇವೆಯೊಂದಿಗೆ ನಾಯಕನಾಗಿ ಬೆಳೆಯಲು ರಾ.ಸೇ.ಯೋಜನೆಯಿಂದ ಸಾಧ್ಯ ಎಂದು ನುಡಿದರು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು. ರಾ.ಸೇ.ಯೋಜನೆಯ ಸಲಹಾ ಸಮಿತಿಯ ಸದಸ್ಯ ಹಾಗೂ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜೇಶ್ ಕೆ ಹಾಜರಿದ್ದರು.
ಘಟಕದ ನಾಯಕಿ ಪ್ರಾಪ್ತಿ ಸ್ವಾಗತಿಸಿ, ನಾಯಕ ಆದಿತ್ಯ ವಂದಿಸಿದರು. ಸ್ವಯಂ ಸೇವಕಿ ಸಾಕ್ಷಿ ನಿರೂಪಿಸಿದರು.