ವಾಹನ ಸವಾರರ ಪರದಾಟ ಗಮನಿಸಿ ರಸ್ತೆಯಲ್ಲೇ ಕುಳಿತು ಏಕಾಂಗಿಯಾಗಿ ಹೋರಾಟ

ಶೇರ್ ಮಾಡಿ

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73ರ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಗಲೀಕರಣ ಕಾಮಗಾರಿ ಜನರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ. ವಾಹನ ಸವಾರರು ರಸ್ತೆಯಲ್ಲಿ ಬೀಳುತ್ತಿರುವುದನ್ನು ಗಮನಿಸಿ ಉಜಿರೆಯ ಹೋಟೆಲ್ ಮಾಲಕರೋರ್ವರು ಏಕಾಂಗಿಯಾಗಿ ರಸ್ತೆ ಮಧ್ಯೆ ಕುಳಿತು ಹೋರಾಟ ನಡೆಸಿದ್ದಾರೆ.

ಉಜಿರೆಯಿಂದ ಮುಂಡಾಜೆ ಸಾಗುವ ರಸ್ತೆ, ಬೆಳ್ತಂಗಡಿಯಿಂದ ಮುಂದಕ್ಕೆ ಕಾಶಿಬೆಟ್ಟು ಸಮೀಪ, ಮಡಂತ್ಯಾರಿಂದ ಮುಂದಕ್ಕೆ ಬರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಏರುಪೇರಾದರೂ ಬಿದ್ದು ಅನಾಹುತ ಸಂಭವಿಸುತ್ತಿದೆ. ಉಳಿದಂತೆ ಇತರ ವಾಹನ ಸವಾರರು ಈ ರಸ್ತೆಯ ಸಹವಾಸ ಬೇಡ ಎನ್ನುವಂತಾಗಿದೆ. ಉಜಿರೆಯಲ್ಲಿ ರವಿವಾರ ಹೆದ್ದಾರಿ ಕೆಸರುಮಯವಾದ ಪರಿಣಾಮ ಎರಡು ಮೂರು ದ್ವಿಚಕ್ರ ಸವಾರರು ಅಪಾಘಾತಕ್ಕೀಡಾಗಿದ್ದಾರೆ.

ಕಳೆದ ವಾರ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬಿಸಿರೋಡ್ ಯಿಂದ ಚಾರ್ಮಾಡಿ ವರೆಗೆ ರಸ್ತೆ ಸಮಸ್ಯೆ ಕುರಿತು ಪರಿಶೀಲಿಸಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ವಾರದೊಳಗೆ ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ. ಆದರೆ ಬೇಕಾಬಿಟ್ಟಿ ಕಾಮಗಾರಿಯಿಂದ ಜಿಲ್ಲಾಧಿಕಾರಿಗಳ ಆಜ್ಞೆಗೂ ಕವಡೆ ಕಿಮ್ಮತ್ತಿಲ್ಲ ಎಂಬಂತಾಗಿದೆ.

ಎರಡು ದಿನಗಳ ಹಿಂದೆ ಕಾಶಿಬೆಟ್ಟು ಹಾಗೂ ಇತರೆಡೆ ಕೆಸರುಮಯ ರಸ್ತೆಯಿಂದ‌‌ ನೀರು‌ ನಿಂತು ರಸ್ತೆಯಲ್ಲಿ ಎಲ್ಲಿ ಸಂಚರಿಸಬೇಕೆಂಬ ಗೊಂದಲದಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಪರಿಣಾಮ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಮಳೆಗಾಲದ ಮುನ್ನ ಗುತ್ತಿಗೆದಾರರು, ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಇಲ್ಲವೇ ಡಾಮರೀಕರಣವಾದರೂ ಮಾಡಬೇಕಿತ್ತು.

ಇದು ಯಾವುದೂ ಇಲ್ಲದೆ, ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಯಲ್ಲಿ ನಿಲ್ಲುವುದರಿಂದ ದ್ವಿಚಕ್ರ ಸಹಿತ ತ್ರಿಚಕ್ರ, ಕಾರು ಚಾಲಕರಿಗೆ ಆಪತ್ತು ಎದುರಾಗಿದೆ. ತಕ್ಷಣ ಸೂಕ್ತ ಕ್ರಮ ವಹಿಸಬೇಕು. ಇಲ್ಲವೇ ನಿರಂತರ ಹೋರಾಟ ನಡೆಸುವುದಾಗಿ ಉಜಿರೆ ಹೋಟೆಲ್ ಮಾಲೀಕ ಪ್ರವೀಣ್ ಹಳ್ಳಿಮನೆ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.

Leave a Reply

error: Content is protected !!