ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತಿಗೆ ಒಂದು ವಾರದೊಳಗೆ ಖಾಯಂ ಪಿಡಿಒ ನೇಮಕ ಮಾಡಬೇಕು. ಇಲ್ಲದೇ ಇದ್ದಲ್ಲಿ ಗ್ರಾ.ಪಂ.ಕಚೇರಿ ಬೀಗ ತೆರೆಯಲು ಅವಕಾಶ ನೀಡದೇ ಗ್ರಾಮಸ್ಥರ ಜೊತೆ ಸೇರಿ ಪ್ರತಿಭಟನೆ ನಡೆಸಲು ಜು.4ರಂದು ನಡೆದ ಗ್ರಾ.ಪಂ.ಸದಸ್ಯರ ತುರ್ತು ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ನಲ್ಲಿ ನಡೆಯಿತು. ಅಧ್ಯಕ್ಷ ಸಲಾಂ ಬಿಲಾಲ್ ಅವರು ಮಾತನಾಡಿ, ನೆಲ್ಯಾಡಿ ಗ್ರಾಮ ಪಂಚಾಯತಿಗೆ 1 ವರ್ಷದಿಂದ ಖಾಯಂ ಪಿಡಿಒ ಇಲ್ಲ. ಕುಟ್ರುಪ್ಪಾಡಿ ಗ್ರಾ.ಪಂ.ಪಿಡಿಒ ಆನಂದ ಗೌಡ ಅವರಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ. ಅವರು ವಾರದಲ್ಲಿ ಮೂರು ದಿನ ಮಾತ್ರ ನೆಲ್ಯಾಡಿ ಗ್ರಾಮ ಪಂಚಾಯತಿನಲ್ಲಿ ಇರುತ್ತಾರೆ. ಈಗ ಗ್ರಾಮಪಂಚಾಯತಿನ ಎಲ್ಲಾ ಕೆಲಸಗಳಿಗೂ ಪಿಡಿಒ ತಂಬು ನೀಡಬೇಕಾಗಿದೆ. ಇಲ್ಲಿ ಖಾಯಂ ಪಿಡಿಒ ಇಲ್ಲದೇ ಇರುವುದರಿಂದ ಗ್ರಾಮಸ್ಥರು ಪಂಚಾಯತಿಗೆ ಅಲೆದಾಟ ನಡೆಸುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು, ಪಿಡಿಒ ಇಲ್ಲದೇ ಯಾವುದೇ ಕೆಲಸಗಳೂ ಆಗುತ್ತಿಲ್ಲ. ಇದರಿಂದ ಗ್ರಾಮ ಪಂಚಾಯಿತಿಗೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ತಕ್ಷಣ ಖಾಯಂ ಪಿಡಿಒ ನೇಮಕಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿ.ಪಂ.ಸಿಇಒ ಭೇಟಿಗೆ ನಿರ್ಧಾರ:
ಖಾಯಂ ಪಿಡಿಒ ನೇಮಕ ಕುರಿತಂತೆ ಚರ್ಚೆ ನಡೆದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಬಳಿಕವೂ 1 ವಾರದೊಳಗೆ ಖಾಯಂ ಪಿಡಿಒ ನೇಮಕ ಆಗದೇ ಇದ್ದಲ್ಲಿ ಗ್ರಾ.ಪಂ.ಕಚೇರಿ ಬೀಗ ತೆರೆಯಲು ಅವಕಾಶ ನೀಡದೇ ಗ್ರಾಮಸ್ಥರ ಜೊತೆ ಸೇರಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.
ಪರವಾನಿಗೆ ನವೀಕರಿಸಿ:
ಪರವಾನಿಗೆ ನವೀಕರಿಸದ ವರ್ತಕರಿಗೆ ನೋಟಿಸ್ ನೀಡಿ ಪರವಾನಿಗೆ ನವೀಕರಿಸಲು ಹಾಗೂ ಪರವಾನಿಗೆ ಪಡೆಯದೇ ಇರುವ ವರ್ತಕರು ಪರವಾನಿಗೆ ಪಡೆದುಕೊಳ್ಳುವಂತೆ ಸೂಚನೆ ನೀಡುವುದು. ಆದರೂ ಪರವಾನಿಗೆ ಪಡೆಯದೇ ಇದ್ದಲ್ಲಿ ದಂಡ ವಿಧಿಸಲು ನಿರ್ಣಯ ಕೈಗೊಳ್ಳಲಾಯಿತು. ಇನ್ನಿತರ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಉಪಾಧ್ಯಕ್ಷೆ ರೇಷ್ಮಾಶಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಆನಂದ ಪಿಲವೂರು, ಅಬ್ದುಲ್ ಜಬ್ಬಾರ್, ಮೊಹಮ್ಮದ್ ಇಕ್ಬಾಲ್, ಪ್ರಕಾಶ್ ಕೆ., ಉಷಾ ಜೋಯಿ, ಜಯಂತಿ ಮಾದೇರಿ, ಜಯಲಕ್ಷ್ಮೀಪ್ರಸಾದ್ ಉಪಸ್ಥಿತರಿದ್ದರು. ಲೆಕ್ಕ ಸಹಾಯಕ ಅಂಗು ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.