ಉತ್ತರ ಕನ್ನಡ, ಕರಾವಳಿಯಲ್ಲಿ ಮಳೆ ಮತ್ತೆ ಚುರುಕುಗೊಂಡಿದೆ. ಅರಬ್ಬಿ ಸಮುದ್ರದ ಕಡೆಯಿಂದ ಭಾರಿ ಗಾಳಿ ಬೀಸುತ್ತಿದ್ದು ಸಮುದ್ರ ಕೊರೆತ ಹೆಚ್ಚಿದೆ.
ಸೋಮವಾರ ಕೂಡ ಮಳೆ ಮುಂದುವರಿಯುವ ಲಕ್ಷಣಗಳಿವೆ. ಧಾರವಾಡ, ಗದಗ, ಹಾವೇರಿ ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಿದ್ದು, ಪಶ್ಚಿಮ ದಿಕ್ಕಿನಿಂದ ಬೀಸುವ ಗಾಳಿಯ ವೇಗ ಹೆಚ್ಚಿದಲ್ಲಿ ಅರೆಮಲೆನಾಡು ಮತ್ತು ಬಯಲುಸೀಮೆ ಭಾಗದಲ್ಲಿ ಮಳೆ ಚುರುಕಾಗುವ ಸಾಧ್ಯತೆಯಿದೆ.ಶಿವಮೊಗ್ಗದಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದೆ. ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ಭಾಗದಲ್ಲಿ ಮುಂದುವರಿದಿದ್ದರೂ ಸರಾಸರಿ ಪ್ರಮಾಣ 27.37 ಮಿ.ಮೀ.ಗೆ ಇಳಿಕೆಯಾಗಿದೆ.
ಭರ್ಜರಿ ವರ್ಷಧಾರೆ:
ಮೂಡಿಗೆರೆ, ಕಲಬುರಗಿ, ಹಾಸನ, ಆಗುಂಬೆಯಲ್ಲಿ ಭಾನುವಾರ ವರ್ಷಧಾರೆಯಾಗಿದೆ. ಉಡುಪಿ, ದ.ಕನ್ನಡ, ಉ.ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮುಂದಿನ 2 ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅರ್ಲಟ್ ಘೋಷಿಸಿದೆ. ಕರಾವಳಿ ತೀರದುದ್ದಕ್ಕೂ ಪ್ರತಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಮೂಲ್ಕಿಯಿಂದ ಮಂಗಳೂರಿನವರೆಗೆ, ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳವರೆಗೆ ಎತ್ತರದ ಅಲೆಗಳು ಏಳಲಿವೆ. ಉಡುಪಿಯ ಬೈಂದೂರಿನ ಕಾಪುವರೆಗೆ ಹೈ ವೇವ್ ವಾಚ್ ಅರ್ಲಟ್ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಜು.8ರಿಂದ ಮುಂದಿನ ಎರಡು ದಿನ ಯೆಲ್ಲೋ ಅರ್ಲಟ್ ಇರಲಿದೆ.