ಕಡಬ: ಇಲ್ಲಿನ ಪುಳಿಕುಕ್ಕು ಎಂಬಲ್ಲಿ ಯುವಕನೊಬ್ಬ ಕುಮಾರಧಾರ ನದಿಯ ನೆರೆ ನೀರಿನಲ್ಲಿ ಸಿಲುಕಿಕೊಂಡು ಸಹಾಯಕ್ಕಾಗಿ ಬೊಬ್ಬಿಡುತ್ತಿರುವ ದೃಶ್ಯ ಸೋಮವಾರ ಬೆಳಗ್ಗೆ ಕಂಡುಬಂದಿತ್ತು. ಬಳಿಕ ಅಗ್ನಿಶಾಮಕ ದಳ ಆತನನ್ನು ರಕ್ಷಿಸಿದೆ. ಪುಳಿಕುಕ್ಕುವಿನಲ್ಲಿ ಕುಮಾರಧಾರ ನದಿ ಬಹುತೇಕ ತುಂಬಿ ಹರಿಯುತ್ತಿದೆ. ಈ ಮಧ್ಯೆ ಇಂದು ಬೆಳಗ್ಗೆ ಯುವಕನೋರ್ವ ನದಿಯಲ್ಲಿ ಪೊದೆಗಳನ್ನು ಹಿಡಿದು ರಕ್ಷಿಸುವಂತೆ ಬೊಬ್ಬೆ ಹಾಕುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ ನದಿಯ ನಡುವೆ ಇರುವ ಪೊದೆಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅದಕ್ಕೆ ಪೂರಕವಾಗಿ ಪುಳಿಕುಕ್ಕು ಸೇತುವೆ ಬಳಿಯ ಬಸ್ ತಂಗುದಾಣದಲ್ಲಿ ಆತನದ್ದು ಎನ್ನಲಾದ ಬ್ಯಾಗ್ ಪತ್ತೆಯಾಗಿದೆ.
ಅಗ್ನಿಶಾಮಕ ದಳದ ಸಿಬಂದಿಗಳು ಕಾರ್ಯಾಚರಣೆ ನಡೆಸಿ ಯುವಕನನ್ನು ಹೊಳೆಯಿಂದ ಮೇಲಕ್ಕೆ ತಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಪುತ್ತೂರು ಆಸ್ಪತ್ರೆ ಗೆ ಸಾಗಿಸಲಾಗಿದೆ.
ಬೆಂಗಳೂರು ಮೂಲದ ರವಿಕುಮಾರ್ (40) ಎಂದು ತಿಳಿದುಬಂದಿದೆ. ಆತನ ಕೈಯಲ್ಲಿ ಹರಿತವಾದ ಆಯುಧದಿಂದ ಕೊಯ್ದುಕೊಂಡ ಹಸಿ ಗಾಯವುಕಂಡು ಬಂದಿದೆ.
ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಲೀಲಾವತಿ, ಕಡಬ ಎಸ್ ಐ ಅಭಿನಂದನ್ ಸ್ಥಳದಲ್ಲಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬಂದಿಗಳ ಜೊತೆ ಶ್ರೀ ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಶ್ರಮಿಸಿದ್ದರು.