ಮಂಗಳೂರು ವ್ಯಾಪ್ತಿಯಲ್ಲಿ ದರೋಡೆ: ವೃದ್ಧರನ್ನು ಬೆದರಿಸಿ ಕಾರೊಂದಿಗೆ ಗ್ಯಾಂಗ್ ಪರಾರಿ

ಶೇರ್ ಮಾಡಿ

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ಮತ್ತೊಂದು ದರೋಡೆ ಪ್ರಕರಣ ನಡೆದಿದ್ದು, ಆರೋಪಿಗಳು ಪರಾರಿಯಾದ ಮನೆ ಮಾಲೀಕರು ಕಾರು ಮೂಲ್ಕಿಯಲ್ಲಿ ಪತ್ತೆಯಾಗಿದೆ.

ಮಂಗಳವಾರ ಮುಂಜಾನೆ 3.30ರ ಅವಧಿಯಲ್ಲಿ 4 ಮಂದಿ ದರೋಡೆಕೋರರ ತಂಡ ಉರ್ವ ಕೊಟ್ಟಾರದ ಬಳಿಯಿರುವ ಮನೆ ಪ್ರವೇಶಿಸಿದೆ. ಮನೆಯಲ್ಲಿ ಹಿರಿಯ ನಾಗರಿಕರಿದ್ದು, ಅವರ ಮಕ್ಕಳು ವಿದೇಶದಲ್ಲಿದ್ದಾರೆ. ಮನೆಯವರಿಗೆ ಮಾರಕಾಯುಧ ತೋರಿಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ. ಬಳಿಕ ಮನೆಯ ಕಾರಿನ ಕೀ ಪಡೆದು ಆ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ.

ಹೆಜಮಾಡಿ ಟೋಲ್ ಗೇಟ್ ಮುನ್ನ ಕಾರು ನಿಲ್ಲಿಸಿ ಅವರ ಕಾರಿನಲ್ಲಿ ಪರಾರಿಯಾಗಿರುವ ಶಂಕೆಯಿದೆ. ದರೋಡೆಗೈದ ಸೊತ್ತುಗಳ ಮೌಲ್ಯ ಇನ್ನೂ ತಿಳಿದು ಬಂದಿಲ್ಲ. ಕಾರಿನೊಳಗೆ ಮೊಬೈಲ್ ಒಂದು ಪತ್ತೆಯಾಗಿದ್ದು, ಇದು ಯಾರ ಮೊಬೈಲ್ ಎಂದು ತಿಳಿದು ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ ಇದು ದರೋಡೆಕೋರರ ಮೊಬೈಲ್ ಅವಸರದಲ್ಲಿ ಕಾರಿನಲ್ಲೇ ಬಾಕಿಯಾಗಿರುವ ಸಾಧ್ಯತೆ ಇದೆ. ಕಾರಿನ ಬಾಗಿಲು ಇನ್ನೂ ತೆರೆದು ಪರಿಶೀಲನೆ ನಡೆಸಿಲ್ಲ.
ಕೊಟ್ಟಾರದ ಮನೆಗೆ ಉರ್ವ ಪೊಲೀಸರು, ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುಲ್ಕಿ ಪೊಲೀಸರು ಕಾರನ್ನು ಪತ್ತೆಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಸಿ ಕ್ಯಾಮೆರಾ ಪರಿಶೀಲನೆ:
ಘಟನೆ ಬೆನ್ನಲ್ಲೇ ಪೊಲೀಸರು ದರೋಡೆಗೈದ ಮನೆಯ ಸುತ್ತಮುತ್ತ, ರಸ್ತೆ, ಹೆದ್ದಾರಿಯ ಸಿಸಿ ಕ್ಯಾಮೆರಾಗಳನ್ನು ಶೋಧ ನಡೆಸುತ್ತಿದ್ದಾರೆ.

15 ದಿನದ ಹಿಂದೆ ಘಟನೆ:
ಜೂನ್ 21ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಉಳಾಯಿಬೆಟ್ಟುವಿನ ಪಿಡಬ್ಲುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ಮನೆಗೆ ಇದೇ ರೀತಿ 9ಮಂದಿ ದರೋಡೆಕೋರರ ತಂಡ ಪ್ರವೇಶಿಸಿ ನಗ-ನಗದು ದೋಚಿ, ಇದೇ ಮಾದರಿ ಮನೆಯ ಕಾರಿನಲ್ಲೇ 1 ಕಿ.ಮೀ. ದೂರಕ್ಕೆ ಪರಾರಿಯಾಗಿ, ಬಳಿಕ ಆರೋಪಿಗಳ 2 ಇನೋವಾ ಕಾರಿನಲ್ಲಿ ಪರಾರಿಯಾಗಿತ್ತು. ಈ ಪ್ರಕರಣದಲ್ಲಿ 10ಮಂದಿಯನ್ನು ಬಂಧಿಸಲಾಗಿದ್ದು, ಇನ್ನೂ 5 ಮಂದಿ ಬಂಧನ ಬಾಕಿಯಿದೆ. ನಗ-ನಗದು ಇನ್ನೂ ಸಿಕ್ಕಿಲ್ಲ.

Leave a Reply

error: Content is protected !!