ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಶುರುವಾಗಿ ಬರೀ ಒಂದು ತಿಂಗಳಲ್ಲಿಯೇ 83 ಶಾಲೆಗಳಿಗೆ ಹಾನಿಯಾಗಿದ್ದು, ಸರಿಸುಮಾರು 3 ಕೋಟಿ ರೂ.ನಷ್ಟು ನಷ್ಟವಾಗಿದೆ. ಬಂಟ್ವಾಳ ಹಾಗೂ ಉಳ್ಳಾಲ ಭಾಗದಲ್ಲೇ ಅತೀ ಹೆಚ್ಚು ಶಾಲೆಗಳಿಗೆ ಹಾನಿಯಾಗಿದೆ. ಕೆಲವೊಂದು ಶಾಲೆಗಳಿಗೆ ತೀವ್ರ ಹಾನಿಯಾದರೆ ಇನ್ನು ಕೆಲವು ಕಡೆಯಲ್ಲಿ ಸಾಧಾರಣ ಹಾನಿಯಾಗಿದೆ.
ಮುಂಗಾರು ಮಳೆಯ ಅಬ್ಬರ ಜೂನ್‌ನಲ್ಲಿ ಶುರುವಾದಂತೆ ಕೆಲವು ಭಾಗದ ಶಾಲೆಗಳು ಗಾಳಿ, ಮಳೆಯ ಅಬ್ಬರದಲ್ಲಿ ಹಾನಿಯಾಗಿದೆ. ವಿಶೇಷವಾಗಿ ಜೂನ್‌ನ ಕೇವಲ 15 ದಿನಗಳಲ್ಲಿಯೇ ಮಳೆಯ ತೀವ್ರತೆಯಲ್ಲಿ ಶಾಲೆಗಳು ಕಂಗಾಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಹಾನಿಯಾಗಿರುವ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇದರಲ್ಲಿ83 ಶಾಲೆಗಳನ್ನು ಸೇರಿಸಲಾಗಿದೆ.
ಬಂಟ್ವಾಳ, ಉಳ್ಳಾಲದಲ್ಲೇ ಜಾಸ್ತಿ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ83 ಶಾಲೆಗಳಲ್ಲಿ ಬಂಟ್ವಾಳದಲ್ಲಿಅತಿ ಹೆಚ್ಚು ಅಂದರೆ 49 ಶಾಲೆಗಳಿಗೆ ಹಾನಿಯಾಗಿದೆ. ಉಳ್ಳಾಲದಲ್ಲಿ12 ಶಾಲೆಗಳಿಗೆ ಹಾನಿಯಾಗಿದೆ. ಉಳಿದಂತೆ ಮಂಗಳೂರು ದಕ್ಷಿಣದಲ್ಲಿ6, ಬೆಳ್ತಂಗಡಿಯಲ್ಲಿ6, ಪುತ್ತೂರಿನಲ್ಲಿ ಮೂರು, ಸುಳ್ಯದಲ್ಲಿಒಂದು, ಮೂಡುಬಿದಿರೆಯಲ್ಲಿಎರಡು, ಮೂಲ್ಕಿಯಲ್ಲಿ ಶೂನ್ಯ, ಕಡಬದಲ್ಲಿ 4 ಹಾಗೂ ಶಾಲೆಗಳಿಗೆ ಮುಂಗಾರು ಮಳೆಯಿಂದಾಗಿ ಹಾನಿಯಾಗಿದೆ.
ಇದರಲ್ಲಿ ಕೆಲವು ಶಾಲೆಗಳ ಆವರಣ ಗೋಡೆಗಳು ಕುಸಿದು ಬಿದ್ದರೆ ಇನ್ನು ಕೆಲವು ಶಾಲೆಗಳ ಚಾವಣಿಯಲ್ಲಿ ಮಳೆ ನೀರು ಸೋರಿಕೆ, ಕಟ್ಟಡದಲ್ಲಿ ಬಿರುಕು ಜತೆಯಲ್ಲಿಇತರ ಹಾನಿಗಳು ಸಂಭವಿಸಿದೆ. ಉಳಿದಂತೆ ತೀರ ಅಪಾಯದ ಸ್ಥಿತಿಯಲ್ಲಿರುವ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಪಾಠ ಮಾಡದಂತೆ ಈಗಾಗಲೇ ಇಲಾಖೆ ಸೂಚನೆ ನೀಡಿದ ಪ್ರಕಾರ ಕೆಲವು ತರಗತಿಗಳನ್ನು ಕೆಡವಿ ಹಾಕಲಾಗಿದೆ. ಇನ್ನು ಕೆಲವು ತರಗತಿಗಳನ್ನು ಮುಚ್ಚಲಾಗಿದೆ. ಮತ್ತೆ ಕೆಲವು ಮಳೆ ನಿಂತ ಬಳಿಕ ತರಗತಿಗಳನ್ನು ಕೆಡವಲು ಸಿದ್ಧತೆಗಳು ಸಾಗಿದೆ.
ಮೂರು ಕೋಟಿ ರೂ. ನಷ್ಟ ಅಂದಾಜು:
ಜಿಲ್ಲೆಯಲ್ಲಿಈಗ ಶಾಲೆಗಳ ಹಾನಿಯ ಪ್ರಮಾಣದ ಲೆಕ್ಕಚಾರಗಳು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಾಗಿದೆ. ಈಗಾಗಲೇ ಮೂರು ಕೋಟಿ ರೂ.ನಷ್ಟು ನಷ್ಟ ಸಂಭವಿಸಿರಬಹುದು ಎನ್ನುವುದು ಅಂದಾಜು ಲೆಕ್ಕಚಾರ ಕೂಡ ನಡೆದಿದೆ. ಮುಖ್ಯವಾಗಿ ತೀವ್ರ ಮಳೆಯಿಂದ ಹಾನಿಯಾಗಿ ತರಗತಿಗಳನ್ನು ನಡೆಸಲು ಸಾಧ್ಯವಾಗದೇ ಇದ್ದಾಗ ಎನ್‌ಡಿಆರ್‌ಎಫ್/ ಎಸ್‌ಡಿಆರ್‌ಎಫ್ ನಿಧಿಯನ್ನು ಬಳಸಿಕೊಂಡು ಕಾಮಗಾರಿಯನ್ನು ನಡೆಸಿಕೊಳ್ಳಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದರು. ಇದರ ಪ್ರಕಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಶಾಲೆಗಳ ಹಾನಿಗಳ ವರದಿ ಹಾಗೂ ನಷ್ಟದ ಲೆಕ್ಕವನ್ನು ನೀಡಿದರೆ ಈ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನುವುದು ಇಲಾಖೆಯವರು ನೀಡುವ ಮಾಹಿತಿ.
ಶಾಲೆಗಳ ಹಾನಿಯ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಉಳಿದಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಮಾಹಿತಿ ನೀಡಿ ಅವರು ಇದಕ್ಕೆ ತಗಲುವ ಖರ್ಚುಗಳ ವರದಿಯನ್ನು ನೀಡಿದ ಬಳಿಕ ಡಿಡಿಪಿಐ ಮೂಲಕ ಕಮೀಷನರ್‌ಗೆ ಪತ್ರ ಬರೆದು ಅವರು ಅನುಮೋದನೆ ನೀಡಿದ ಬಳಿಕ ಕೆಲಸವನ್ನು ಕೈಗೊಳ್ಳುತ್ತೇವೆ. ತೀವ್ರ ಹಾನಿಯಾದರೆ ಜಿಲ್ಲಾಧಿಕಾರಿಗಳ ಮೂಲಕ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ನಿಧಿಯನ್ನು ಬಳಸಿಕೊಂಡು ಕೆಲಸ ಮಾಡುತ್ತೇವೆ ಎನ್ನುತ್ತಾರೆ ಮಂಗಳೂರು ದಕ್ಷಿಣದ ಬಿಇಒ ಈಶ್ವರ್ ಅವರು.