ಕಳ್ಳರು ಬಂದಾರು ಎಚ್ಚರ..ಎಚ್ಚರ! ಕರಾವಳಿಗೆ ಹೊರರಾಜ್ಯದ ಚಡ್ಡಿ ಗ್ಯಾಂಗ್ ಕಳ್ಳರ ಎಂಟ್ರಿ

ಶೇರ್ ಮಾಡಿ

ಮಳೆಗಾಲದಲ್ಲಿ ಕಳವು, ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಕರಾವಳಿಗೆ ಹೊರರಾಜ್ಯದ ಕಳ್ಳರು ಎಂಟ್ರಿಯಾಗಿರುವ ಅನುಮಾನ ದಟ್ಟವಾಗಿದೆ.

ಕಳೆದ ಕೆಲವು ದಿನಗಳಿಂದ ರಾತ್ರಿ ಹೊತ್ತು ಗಾಳಿ-ಬಿರುಸಿನ ಮಳೆಯಾಗುತ್ತಿದ್ದು, ಮನೆ, ಅಂಗಡಿ, ದೇವಸ್ಥಾನ, ದೈವಸ್ಥಾನದಲ್ಲಿ ಕಳವು ಚಟುವಟಿಕೆಗಳು ಹೆಚ್ಚಾಗುತ್ತಿವೆ. ಕೋಡಿಕಲ್‌ನಲ್ಲಿ ನಡೆದ ಕಳವು ಪ್ರಕರಣದಲ್ಲಿ ಹೊರರಾಜ್ಯದ ಕಳ್ಳರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಚಡ್ಡಿ, ಬನಿಯನ್‌ ಧರಿಸಿದ ಕಳ್ಳರು ಮನೆಯೊಂದಕ್ಕೆ ನುಗ್ಗಿ ಕಳವು ಯತ್ನ ನಡೆಸಿದ್ದಾರೆ.

ಕಳ್ಳತನಕ್ಕೆ ಅನುಕೂಲವಾಗಲೆಂದು ಸರಳ ಉಡುಪು ಹಾಕಿಕೊಂಡು ಬರುವ ಈ ಗ್ಯಾಂಗ್‌ ಸೊಂಟದಲ್ಲಿ ಮಾರಕಾಸ್ತ್ರಯಿಟ್ಟುಕೊಂಡೇ ಕೃತ್ಯಕ್ಕೆ ಇಳಿಯುತ್ತದೆ. ಮಳೆಗಾಲಕ್ಕೆ ಎಂಟ್ರಿಯಾಗುವ ಈ ಗ್ಯಾಂಗ್‌ ತಮ್ಮ ಕೃತ್ಯ ಮುಗಿಸಿದ ಬಳಿಕ ತಮ್ಮೂರಿಗೆ ಪರಾರಿಯಾಗುತ್ತವೆ. ತಮಿಳುನಾಡು, ಮಧ್ಯಪ್ರದೇಶ, ಬಿಹಾರದಲ್ಲಿ ಇಂತಹ ತಂಡಗಳು ಅಧಿಕವಾಗಿದ್ದು, ಈ ತಂಡಗಳೇ ಬಂದಿರುವ ಶಂಕೆ ಪೊಲೀಸರಲ್ಲಿ ವ್ಯಕ್ತವಾಗಿದೆ.

ಕಾಣಿಕೆ ಡಬ್ಬಿಗಳ ಕಳವು ಹೆಚ್ಚು:
ಮಳೆಗಾಲದಲ್ಲಿ ನಡೆಯುತ್ತಿರುವ ಕಳವು ಪ್ರಕರಣಗಳಲ್ಲೂ ರಸ್ತೆ ಬದಿ, ದೈವಸ್ಥಾನ-ದೇವಸ್ಥಾನಗಳ ಕಾಣಿಕೆ ಡಬ್ಬಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಮಳೆಗಾಲದಲ್ಲಿ ರಾತ್ರಿ 11 ಗಂಟೆಯ ಬಳಿಕ ಬಹುತೇಕ ಎಲ್ಲ ಚಟುವಟಿಕೆಗಳು ಸ್ತಬ್ಧವಾಗುತ್ತವೆ. ಇದರಿಂದ ಕಳವು ಕೃತ್ಯಗಳು ಇದೇ ಅವಧಿಯಲ್ಲಿ ಅಧಿಕವಾಗಿದೆ.

ಪೊಲೀಸರಿಂದ ಮುನ್ಸೂಚನೆಗಳು
ಮಂಗಳೂರು ನಗರದಲ್ಲಿ ಅಂತಾರಾಜ್ಯ ಕಳ್ಳರು, ಚಡ್ಡಿ ಗ್ಯಾಂಗ್‌, ಮನೆ ಕಳವು ಮಾಡುವವರು ಸಂಚರಿಸುತ್ತಿರುವ ಬಗ್ಗೆ ಮಾಹಿತಿಯಿದ್ದು, ಸಾರ್ವಜನಿಕರು ರಾತ್ರಿ ವೇಳೆ ಮನೆ ಕಿಟಕಿ, ಬಾಗಿಲು ಭದ್ರವಾಗಿ ಹಾಕಿಕೊಂಡು ಎಚ್ಚರ ವಹಿಸಬೇಕು.

ಬೆಲೆಬಾಳುವ ಸೊತ್ತುಗಳನ್ನು ಮನೆಯಲ್ಲಿಡದೆ ಸೇಫ್‌ ಲಾಕರ್‌ನಲ್ಲಿಡುವುದು, ಮನೆ ಮತ್ತು ವಾಸ್ತವ್ಯದ ಪರಿಸರದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಸುಸ್ಥಿತಿಯಲ್ಲಿಡುವುದು.

ಅಪರಿಚಿತ, ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿಕೂಡಲೇ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವುದು.

ನಿಮ್ಮ ವಸತಿ, ಬಡಾವಣೆ, ಪರಿಸರದಲ್ಲಿ ದಾರಿ ದೀಪ, ಸಾರ್ವಜನಿಕ ದೀಪಗಳು ಉರಿಯುತ್ತಿರುವ ಬಗ್ಗೆ ದೃಢಪಡಿಸುವುದು. ಕೆಟ್ಟು ಹೋದಲ್ಲಿದುರಸ್ತಿಗೆ ಸ್ಥಳೀಯಾಡಳಿತಕ್ಕೆ ತಿಳಿಸುವುದು.

ಒಂಟಿ ಮನೆಗಳು, ಲಾಕ್ಡ್‌ ಹೌಸ್‌, ಹಿರಿಯ ನಾಗರಿಕರು, ಮಹಿಳೆಯರು ಮಾತ್ರ ವಾಸ್ತವ್ಯ ಇರುವ ಮನೆಗಳಿದ್ದಲ್ಲಿ ಬೀಟ್‌ ಪೊಲೀಸರಿಗೆ ತಿಳಿಸುವುದು.

Leave a Reply

error: Content is protected !!