ಡಯಾಲಿಸಿಸ್ ಕೇಂದ್ರ ಇನ್ನೂ ಬಂದಿಲ್ಲ | ಧೂಳು ಹಿಡಿಯುತ್ತಿರುವ ಎಕ್ಸ್ ರೇ ಮೆಷಿನ್|
ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ 9 ಗ್ರಾಮಗಳನ್ನೊಳಗೊಂಡ ಹೋಬಳಿ ಕೇಂದ್ರವಾಗಿದ್ದು, 11,619 ಜನಸಂಖ್ಯೆ ಹೊಂದಿದೆ. 2021ರಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರ ಸುಂದರವಾಗಿದ್ದರೂ, ಖಾಲಿ ಹುದ್ದೆಗಳೇ ಎದ್ದು ಕಾಣುತ್ತಿದೆ. ಸುಸಜ್ಜಿತ ಆಸ್ಪತ್ರೆ ಇದ್ದರೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ.
ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿ, ಹೆರಿಗೆ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ಎಕ್ಸ್, ಡಯಾಲಿಸಿಸ್ ಕೇಂದ್ರ ಸೇರಿದಂತೆ ಅನೇಕ ಹುದ್ದೆ ಖಾಲಿ ಇದೆ. ಆತೀ ಅಗತ್ಯದ ಹುದ್ದೆಗಳೇ ಭರ್ತಿಯಾಗಿಲ್ಲ.
ಮುಚ್ಚಿದ ಶವಗಾರ ಕೊಠಡಿ
ಕೋಟಿಗಟ್ಟಲೆ ಖರ್ಚು ಮಾಡಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ವರ್ಷಗಳು ಕಳೆದರೂ ಸಿಬ್ಬಂದಿ ನೇಮಕ ಮಾಡದ ಸರಕಾರದ ಕ್ರಮದ ವಿರುದ್ಧ ಜನಾ ಕ್ರೋಶವಿದೆ. ಆಸ್ಪತ್ರೆಯ ವ್ಯಾಪ್ತಿಯಲ್ಲಿ ನೂರಾರು ಎಂಡೋಸಲ್ಫಾನ್ ಬಾಧಿತರಿದ್ದಾರೆ. 9 ಗ್ರಾಮಗಳ ಸಾರ್ವ ಜನಿಕರಿದ್ದಾರೆ. ಸಣ್ಣಮಟ್ಟದಿಂದ ಹಿಡಿದು ದೊಡ್ಡ ಮಟ್ಟದ ಚಿಕಿತ್ಸೆವರೆಗೂ ಈ ಆಸತ್ರೆಯನ್ನು ಅವಲಂಬಿಸು ವುದು ಅನಿವಾರ್ಯವಾಗಿದ್ದು, ದಿನವೊಂದಕ್ಕೆ 100ರಿಂದ 150 ಹೊಸ ರೋಗಿಗಳು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿರಿಯ ವೈದ್ಯಾಧಿಕಾರಿ, ಪ್ರಸೂತಿ ತಜ್ಞ, ಮಕ್ಕಳ ತಜ್ಞ, ಕಣ್ಣು ಹಾಗೂ ಮೂಳೆ ತಜ್ಞ, ಎಕ್ಸ್ ಟೆಕ್ನಿಷಿಯನ್, ಸಮುದಾಯ ಆರೋಗ್ಯ ಅಧಿಕಾರಿ, ಹಿರಿಯ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ 2 ಹುದ್ದೆ, ಆರೋಗ್ಯ ನಿರೀಕ್ಷಣಾಧಿಕಾರಿ 1 ಹುದ್ದೆ, ಗ್ರೂಪ್ ಡಿ 3 ಹುದ್ದೆ, ಸ್ಟಾಪ್ ನರ್ಸ್ 1 ಹುದ್ದೆ ಖಾಲಿ ಇದೆ.
ಸುಬ್ರಹ್ಮಣ್ಯ, ಧರ್ಮಸ್ಥಳ, ಸೌತಡ್ಕ ಮುಂತಾದ ಪುಣ್ಯ ಕ್ಷೇತ್ರಗಳ ಮಧ್ಯೆ ಕೊಕ್ಕಡ ಇರುವುದರಿಂದ ಅಪಘಾತ ಪ್ರಕರಣವೂ ಹೆಚ್ಚಿದೆ. ಇದಕ್ಕೂ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರ ಸಹಕಾರಿ. ಆಸ್ಪತ್ರೆಯಲ್ಲಿ ಹೊಸ 108 ಅಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿದೆ.
ರಾಷ್ಟ್ರೀಯ ಮೌಲ್ಯ ಮಾಪಕ್ಕೆ ಆಯ್ಕೆ:
ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಭೇಟಿ ನೀಡಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಆರೋಗ್ಯ ಕೇಂದ್ರದಲ್ಲಿ ದಂತ, ಬಾಯಿ ಮತ್ತು ಮುಖಾಂಗ ಶಸ್ತ್ರಚಿಕಿತ್ಸಾ ತಜ್ಞರು, ಆಯುಷ್ ವೈದ್ಯಾಧಿಕಾರಿಗಳು ಎಲ್ಲವನ್ನೂ ನಿರ್ವಹಿಸುವ ಅನಿವಾರ್ಯತೆ ಇದೆ.
ನಿಡ್ಲೆ ಹಾಗೂ ಪಟ್ಟಮೆಗಳಲ್ಲಿ ಸುಸಜ್ಜಿತ ಉಪಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನಿಡ್ಲೆ ಉಪಕೇಂದಕ್ಕೆ ಇತ್ತೀಚೆಗೆ ಎನ್‌ಕ್ಯೂಎಎಸ್ ಮೌಲ್ಯ ಮಾಪನದಲ್ಲಿ ರಾಜ್ಯ ದಲ್ಲಿ ಶೇ.94 ಅಂಕ ಸಿಕ್ಕಿದ್ದು, ರಾಷ್ಟ್ರೀಯ ಮೌಲ್ಯಮಾಪನಕ್ಕೆ ಆಯ್ಕೆಯಾಗಿದೆ.
ಧೂಳು ಹಿಡಿಯುತ್ತಿರುವ ಎಕ್ಸ್ ರೇ ಮೆಷಿನ್
ಡಯಾಲಿಸಿಸ್ ಯಂತ್ರ ಅಗತ್ಯ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಬೇಕೆಂಬ ಬೇಡಿಕೆಯಿತ್ತು. ಅಂದಿನ ಆರೋಗ್ಯ ಸಚಿವ ಸುಧಾಕರ್ ಅವರಿಗೆ ಎಂಡೋ ಸಲ್ಫಾನ್ ವಿರೋಧಿ ಹೋರಾಟಗಾರರು ಮನವಿ ನೀಡಿದ್ದರು. ಆದರೂ ಫಲ ನೀಡಿಲ್ಲ. ಆಸ್ಪತ್ರೆಗೆಂದೇ ಶವಾಗಾರವಿದೆ. ಆದರೆ ಅದು ಬಳಕೆಯಾಗುತ್ತಿಲ್ಲ. ಸುತ್ತಲಿನ ಗ್ರಾಮದವರು ಬೆಳ್ತಂಗಡಿಗೆ ಹೋಗುವ ಅನಿವಾರ್ಯತೆ ಇದೆ. ಶವಾಗಾರ ಕಾರ್ಯಾರಂಭ ಮಾಡಬೇಕಾದರೆ ಅದಕ್ಕೆ ಬೇಕಾದ ತಜ್ಞರು ಮತ್ತು ಇತರ ಸಿಬ್ಬಂದಿ ಬೇಕಾಗುತ್ತದೆ. ಅದಿಲ್ಲದ ಕಾರಣ ಶವಾಗಾರ ಇನ್ನೂ ಇಲ್ಲದಂತಾಗಿದೆ.
ಡಾ.ಪ್ರಕಾಶ್ ವೈದ್ಯಾಧಿಕಾರಿಯಾಗಿದ್ದಾಗ ಈ ಆಸ್ಪತ್ರೆಯಲ್ಲಿ ಅತಿ ಹೆಚ್ಚು ಹೆರಿಗೆ ನಡೆಯುತ್ತಿತ್ತು. ಇಂದು ವೈದ್ಯರಿಲ್ಲದೆ ಸಾಮಾನ್ಯ ಜನರು ಖಾಸಗಿ ಆಸ್ಪತ್ರೆಯನ್ನು ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ. 24X7 ಆಸತ್ರೆ ಇದಾಗಿದ್ದು ರಾತ್ರಿ ವೇಳೆ ವೈದ್ಯಕೀಯ ವಿದ್ಯಾರ್ಥಿಗಳು ಸೇವೆ ನೀಡುತ್ತಿರುವುದು ವಿಪರ್ಯಾಸ. ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರ ನೇಮಕ ಶೀಘ್ರ ಆಗಬೇಕು.
-ಶಾಂತಪ್ಪ ಮಡಿವಾಳ, ಕೊಕ್ಕಡ
ಔಷಧ ಕೊರತೆ ಇಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಗರಿಷ್ಠ ಸೇವೆ ನೀಡುತ್ತಿದ್ದೇವೆ. ಎಕ್ಸ್‌ರೇ ಉಪಕರಣವಿದ್ದು, ತಜ್ಞರ ಕೊರತೆ ಎದುರಿಸುತ್ತಿದ್ದೇವೆ.
-ಡಾ.ತುಷಾರ ಕುಮಾರಿ, ಆಡಳಿತ ವೈದ್ಯಾಧಿಕಾರಿ, ಕೊಕ್ಕಡ ಆರೋಗ್ಯ ಕೇಂದ್ರ