ಉಜಿರೆ: ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಪೋಷಕರಿಗೆ ಒಳ್ಳೆಯ ಮಕ್ಕಳಾಗಿ, ನಾಯಕತ್ವ ಗುಣ ಬೆಳೆಸಿಕೊಂಡು, ಸಮಾಜದಲ್ಲಿ ತಮ್ಮನ್ನು ತಾವು ಉತ್ತಮ ರೀತಿಯಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ಪ್ರಾಮಾಣಿಕ ಸಮಾಜಸೇವಕರಾಗಿ ತೊಡಗಿಕೊಳ್ಳಬೇಕು ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ, ಮಂಗಳೂರಿನ ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ಪ್ರತಿಮ್ ಕುಮಾರ್ ಕೆ.ಎಸ್. ಹೇಳಿದರು.
ಉಜಿರೆಯ ಶ್ರೀ ಧ. ಮಂ.ಕಾಲೇಜಿನ ರೋವರ್ಸ್ ರೇಂಜರ್ಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ನಿಪುಣ್ ಪರೀಕ್ಷಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ಜು.19ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
“ರೋವರ್ಸ್ ಮತ್ತು ರೇಂಜರ್ಸ್ (ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್) ಯುವ ಜನತೆಗಾಗಿ ಇರುವಂಥದ್ದಾಗಿದ್ದು, ಸ್ವಯಂಸೇವಕರು (ವಿದ್ಯಾರ್ಥಿಗಳು) ತಾವು ಮಾಡುವ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿ, ತಮ್ಮ ಸೇವೆಯನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಬೇಕು. ಅದರೊಂದಿಗೆ ಕಾಯಾ-ವಾಚಾ-ಮನಸಾ ಪರಿಶುದ್ಧರಾಗಿ ಕರ್ತವ್ಯ ನಿರ್ವಹಿಸಬೇಕು” ಎಂದು ಅವರು ಕಿವಿಮಾತು ಹೇಳಿದರು.
ಸ್ಕೌಟಿಂಗ್’ನ ‘ನಿಪುಣ್’ ಪರೀಕ್ಷೆ ಕುರಿತು ಸಲಹೆಗಳನ್ನು ಅವರು ನೀಡಿದರು. ಪರೀಕ್ಷೆಗೆ ಯಾವ ರೀತಿ ತಯಾರಾಗಬೇಕೆಂದು ತಿಳಿಸಿದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಮಾನವೀಯ ಸಂಬಂಧಗಳು ನಲುಗುತ್ತಿರುವ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಕಡಿಮೆಯಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಆಶಾಕಿರಣದ ರೂಪದಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ತಮ್ಮ ಸಮಾಜಸೇವೆಯ ಮೂಲಕ ಗುರುತಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ರೋವರ್ಸ್ ಮತ್ತು ರೇಂಜರ್ಸ್ ಘಟಕದ ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು. ಘಟಕದ ಮುಖ್ಯಸ್ಥರಾದ ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ಮತ್ತು ರೇಂಜರ್ ಲೀಡರ್ ಗಾನವಿ ಡಿ., ನಾಯಕರಾದ ಸೀನಿಯರ್ ರೋವರ್ ದಿಲೀಪ್ ಎ. ಮತ್ತು ಸೀನಿಯರ್ ರೇಂಜರ್ ಹರ್ಷಿಣಿ ಬಿ.ಸಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೇಂಜರ್ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.