ಕೊಕ್ಕಡ: ಧರ್ಮಸ್ಥಳ- ನಿಡ್ಲೆ ಮಾರ್ಗದ ಬೊಳಿಯಾರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಇಳಿದ ಕಾಡಾನೆ ಓಡಾಟದಿಂದ ಎರಡು ವಾಹನಗಳಿಗೆ ಹಾನಿಯಾದ ಘಟನೆ ಗುರುವಾರ ಬೆಳಗ್ಗೆ 7.40ರ ಸಮಯದಲ್ಲಿ ಸಂಭವಿಸಿದೆ.
ಧರ್ಮಸ್ಥಳ- ನಿಡ್ಲೆ ಮಾರ್ಗದ ಬೋಳಿಯಾರ್ ಬಸ್ ಸ್ಟಾಂಡ್ ಬಳಿ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ. ರಸ್ತೆ ದಾಟುತ್ತಿದ್ದ ಕಾಡಾನೆ ರಸ್ತೆಯಲ್ಲಿಯೇ ನಿಂತಿದ್ದು ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಬಂದ ಕೆಎಸ್ಸಾರ್ಟಿಸಿ ಬಸ್ಸನ್ನು ಅಡ್ಡಗಟ್ಟಿದ ಕಾಡಾನೆ ಬಸ್ಸಿನ ಮುಂಭಾಗಕ್ಕೆ ತಿವಿದಿದ್ದು ಬಸ್ಸಿನ ಮುಂಭಾಗ ಜಖಂಗೊಂಡಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಇದೇ ವೇಳೆ ರಸ್ತೆಯಲ್ಲಿ ಬಂದ ದ್ವಿಚಕ್ರ ವಾಹನವನ್ನು ಬಿಟ್ಟು ಅದರ ಸವಾರ ಆನೆಯಿಂದ ತಪ್ಪಿಸಿಕೊಂಡಿದ್ದು ವಾಹನವನ್ನು ಕಾಡಾನೆ ಹಾನಿಗೊಳಿಸಿದೆ.
ಬೊಳಿಯಾರ್ ಹಾಗೂ ಮುಳಿಕಾರು ಪರಿಸರದಲ್ಲಿ ಎರಡು ದಿನಗಳಿಂದ ಕಾಡಾನೆಗಳ ಹಿಂಡು ತಿರುಗಾಡುತ್ತಿದ್ದು ಕೃಷಿಕರಿಗೆ ತೊಂದರೆಯುಂಟುಮಾಡುತ್ತಿದೆ. ಇದೀಗ ಹೆದ್ದಾರಿಗೆ ಕಾಡಾನೆ ಇಳಿದಿರುವುದು ಜನರಲ್ಲಿ ಭಯ ಹೆಚ್ಚಿಸಿದೆ.