ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಗಣೇಶ ಚತುರ್ಥಿ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಬಯಲು ಆಲಯ ಖ್ಯಾತಿಯ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸುಮಾರು ಏಳು ಸಾವಿರದಷ್ಟು ಭಕ್ತಾದಿಗಳ ಆಗಮನದೊಂದಿಗೆ ಶ್ರೀಗಣೇಶ ಚತುರ್ಥಿ ವಿಶೇಷ ಪೂಜೆ ನಡೆಯಿತು.

ಬೆಳಿಗ್ಗೆ 8ಗಂಟೆಯಿಂದಲೇ ಗಣಪತಿಗೆ ವಿಶೇಷ ಪೂಜೆ. 108 ಕಾಯಿ ಗಣಹೋಮ ನಂತರ ರಂಗಪೂಜೆ, ಮದ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನೆರವೇರಿತು.

ಗಣಪನಿಗೆ ವಿಶೇಷ ಅಲಂಕಾರ
ಗಣೇಶ ಚತುರ್ಥಿಯ ಈ ವಿಶೇಷ ದಿನದಂದು ದೇವರಿಗೆ ವಿಶೇಷವಾಗಿ ಮಲ್ಲಿಗೆ, ಸೇವಂತಿಗೆ, ತುಳಸಿ, ಗುಲಾಬಿ, ಗರಿಕೆ, ಚೆಂಡು ಹೂವು, ಇನ್ನೂ ವಿವಿಧ ಆಕರ್ಷಕ ಮತ್ತು ದೇವರಿಗೆ ಪ್ರಿಯವಾದ ಹೂವುಗಳ ಹಾರದಿಂದ ಅಲಂಕರಿಸಲಾಗಿತ್ತು.

ಊರ ಪರವೂರ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರಿಗೆ ಪ್ರಿಯವಾದ ಗರಿಕೆ, ಸೌತೆಕಾಯಿ, ಹರಕೆಯ ಗಂಟೆ, ನೀಡಿ ದೇವರ ದರ್ಶನ ಪಡೆದರು. ದಾಖಲೆ ಪ್ರಮಾಣದಲ್ಲಿ ಅವಲಕ್ಕಿ ಪಂಚಕಜ್ಜಾಯ ಸೇವೆ, ಅಪ್ಪ ಸೇವೆ, ಮೋದಕ ಸೇವೆ ಭಕ್ತಾದಿಗಳಿಂದ ನೆರವೇರಿತು

ಈ ಸಂಧರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ್, ಮ್ಯಾನೇಜರ್ ರಾಮಕೃಷ್ಣ ಎಡಪಡಿತ್ತಾಯ, ಅರ್ಚಕ ವೃಂದ, ಮಾಜಿ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

11ಸಾವಿರ ಅವಲಕ್ಕಿ ಪಂಚಕಜ್ಜಾಯ ಸೇವೆ, 6ಕ್ವಿಂಟಾಲ್ ಗೋಧಿ ಹಿಟ್ಟಿನಿಂದ ತಯಾರಿಸಿದ ಅಪ್ಪ ಕಜ್ಜಾಯ, 3ಸಾವಿರದಷ್ಟು ಮೋದಕದ ಪ್ಯಾಕೆಟ್, 4ಸಾವಿರದಷ್ಟು ಲಡ್ಡು ಹಾಗೂ 7,000 ಜನರು ಮಧ್ಯಾಹ್ನದ ಅನ್ನಸಂತರ್ಪಣೆಯಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ.

ವಿಶೇಷವಾದ ಹೂವಿನ ಅಲಂಕಾರದ ಸೇವೆಯನ್ನು ಬೆಂಗಳೂರಿನ ವೆಂಕಟೇಶ ಹಾಗೂ ಅನ್ನ ಸಂತರ್ಪಣೆಗೆ ಬೇಕಾದಂತಹ ತರಕಾರಿ ವ್ಯವಸ್ಥೆಯನ್ನು ಮೈಸೂರಿನ ಬಾಲಕೃಷ್ಣ ಪೆಜೆತ್ತಾ ಅವರು ಸೇವಾ ರೂಪದಲ್ಲಿ ನೀಡಿರುತ್ತಾರೆ.

Leave a Reply

error: Content is protected !!