ನೆಲ್ಯಾಡಿ: ಇದೀಗ ವಿಘಟನೆ ಮಾಡುವಂತಹ ಸಾಗುತ್ತಿದೆ. ಜಾತಿ, ಜಾತಿಗಳ ಮಧ್ಯೆ ವ್ಯತ್ಯಾಸವಿದೆ ಅದು ಸರಿಯಾದರೆ ಮಾತ್ರ ಸಮಸ್ತ ಹಿಂದೂ ರಾಷ್ಟ್ರ ತಲೆಯೆತ್ತಿ ನಿಲ್ಲಲು ಸಾಧ್ಯವಿದೆ ಎಂದು ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಕೆದ್ದೋಟೆ ಹೇಳಿದರು.
ನೆಲ್ಯಾಡಿ – ಕೌಕ್ರಾಡಿ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ 42ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧರ್ಮ ಜಾಗೃತಿ ಸಭೆಯಲ್ಲಿ ಧಾರ್ಮಿಕ ಭಾಷಣದಲ್ಲಿ ಮಾತನಾಡಿದರು.
1893ನೇ ಇಸವಿಗಿಂತ ಹಿಂದೆಯೋ ದೇಶದಾದ್ಯಂತ ಗಣೇಶ ಚತುರ್ಥಿ ನಡೆಯುತ್ತಿತ್ತು. ಬ್ರಿಟಿಷರ ವಿರುದ್ಧ ದಂಗೆಗಳು, ಸಮರಗಳು ನಡೆಯುತ್ತಿದ್ದಾಗ ಬ್ರಿಟಿಷರು ಭಾರತದ ಜನಗಳಿಗೆ ಸಾಮಾಜಿಕ ಮತ್ತು ರಾಜಕೀಯದಂತಹ ಚಳುವಳಿ, ಕಾರ್ಯಕ್ರಮಗಳನ್ನು ಮಾಡಬಾರದು, ಸಾರ್ವಜನಿಕರನ್ನು ಒಟ್ಟು ಸೇರಿಸಬಾರದು ಎಂಬ ಕಟ್ಟುನಿಟ್ಟಿನ ಆದೇಶವನ್ನು ನೀಡಿದ್ದರು. ಹೇಗಾದರೂ ನಮ್ಮ ಭಾರತೀಯರನ್ನು ಒಟ್ಟು ಸೇರಿಸಬೇಕು, ಸ್ವಾತಂತ್ರ ಹೋರಾಟ ಮಾಡಲೇಬೇಕು, ನಾವು ಏನನ್ನು ಕಳೆದುಕೊಂಡಿದ್ದೇವೆ ಅದನ್ನು ಪುನಃ ಗಳಿಸಲೇಬೇಕು ಎಂಬ ಕಾರಣಕ್ಕಾಗಿ ಬಾಲ ಗಂಗಾಧರ ತಿಲಕರು ಹಾಗೂ ಕೆಲವು ಪ್ರಮುಖರು ಸೇರಿಕೊಂಡು ಸಾರ್ವಜನಿಕ ಜಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ದೇವರಿಗೆ ಎಲ್ಲರೂ ಸಮಾನರು ಎನ್ನುವಂತ ಸಂದೇಶವನ್ನು ಸಾರುವುದರ ಮೂಲಕ ಜನರನ್ನೆಲ್ಲರನ್ನು ಒಟ್ಟು ಸೇರಿಸಿ ದೇವರ ಕಾರ್ಯದೊಂದಿಗೆ ರಾಷ್ಟ್ರ ನಿರ್ಮಾಣದ ಕಾರ್ಯಕ್ಕಾಗಿ ಸಮಸ್ತ ಹಿಂದುಗಳು ಒಟ್ಟು ಸೇರಬೇಕು, ಹೋರಾಡಬೇಕು ಎನ್ನುವಂತಹ ಕಿಚ್ಚನ್ನು ಹಚ್ಚಿಸುವುದಕ್ಕಾಗಿ ಆರಂಭವಾದ ಗಣೇಶೋತ್ಸವ ಈಗ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದರು.
ಕಾರ್ಯಕ್ರಮವನ್ನು ಗೋಳಿತೊಟ್ಟು ದುರ್ಗಾ ಬೀಡಿ ಮಾಲಕ ಕೇಶವ ಪೂಜಾರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ- ಕೌಕ್ರಾಡಿ ಅಧ್ಯಕ್ಷ ರವಿಚಂದ್ರ ಗೌಡ ಅತ್ರಿಜಾಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸವಣೂರು ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಮಂಗಳೂರು ನಾಯರ್ ಸರ್ವಿಸ್ ಸೊಸೈಟಿ ಅಧ್ಯಕ್ಷ ಮುರಳಿ ನಾಯರ್ ಹೊಸಮಜಲು, ನೆಲ್ಯಾಡಿ- ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಧ್ಯಕ್ಷ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ಸುಧೀರ್ ಕುಮಾರ್ ಕೆ.ಎಸ್, ಕೋಶಾಧಿಕಾರಿ ವಿನೋದ್ ಕುಮಾರ್ ಬಾಕಿಜಾಲು, ಜೊತೆ ಕಾರ್ಯದರ್ಶಿ ಮೋಹನ್ ಗೌಡ ಕಟ್ಟೆಮಜಲು, ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ರಮೇಶ್ ಶೆಟ್ಟಿ ಬೀದಿ ಮನೆ, ಕಾರ್ಯದರ್ಶಿ ರಕ್ಷಿತ್ ಎಂ.ಟಿ, ಕೋಶಾಧಿಕಾರಿ ರವಿಚಂದ್ರ ಗೌಡ ಹೊಸವಕ್ಲು ಉಪಸ್ಥಿತರಿದ್ದರು.
ರವಿಚಂದ್ರ ಗೌಡ ಹೊಸವಕ್ಲು ಸ್ವಾಗತಿಸಿದರು, ಗುಡ್ಡಪ್ಪ ಬಲ್ಯ ನಿರೂಪಿಸಿದರು, ಸುಧೀರ್ ಕುಮಾರ್.ಕೆ.ಎಸ್ ವಂದಿಸಿದರು.
ಬೆಳಗ್ಗೆ 6ರಿಂದ ಶ್ರೀ ಗಣಪತಿ ದೇವರ ಪ್ರತಿಷ್ಠೆ, ಭಜನಾ ಕಾರ್ಯಕ್ರಮ, ಗಣ ಹೋಮ, ಛದ್ಮವೇಷ ಸ್ಪರ್ಧೆ, ಸಾರ್ವಜನಿಕ ಅನ್ನಸಂಪರ್ಪಣೆ, ಸುರೇಖಾ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ದೇವರ ಭವ್ಯ ಶೋಭಾಯಾತ್ರೆ ನಡೆಯಿತು.