
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‍ನ ಕೆಂಪುಹೊಳೆ ಸಮೀಪ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಹಾಸನ ನಿವಾಸಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟು ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಸೆ.9ರಂದು ನಡೆದಿದೆ.

ಅಪಘಾತದಲ್ಲಿ ಹಾಸನ ತಾಲೂಕಿನ ಕಟ್ಟಾಯ ಹೋಬಳಿ ನಾಯಕನಹಳ್ಳಿ ನಿವಾಸಿ ಚಂದ್ರೇಗೌಡ(50) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಶೈಲಾ ಹಾಗೂ ಕಿರಣ ಎಂಬವರು ಗಾಯಗೊಂಡಿದ್ದು ಅವರಿಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕಳಿಸಲಾಗಿದೆ ಎಂದು ವರದಿಯಾಗಿದೆ. ಚಂದ್ರೇಗೌಡ ಹಾಗೂ ಗಾಯಾಳುಗಳು ಧರ್ಮಸ್ಥಳದಿಂದ ಹಾಸನ ಕಡೆಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಶಿರಾಡಿ ಘಾಟ್‍ನ ಕೆಂಪುಹೊಳೆ ಸಮೀಪ ಎದುರಿನಿಂದ ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಇದೇ ವೇಳೆ ಕಾರಿನ ಹಿಂದೆ ಬರುತ್ತಿದ್ದ ಮತ್ತೊಂದು ಕಾರು ಸಹ ಹಿಂಭಾಗದಿಂದ ಡಿಕ್ಕಿ ಹೊಡೆದಿರುವುದಾಗಿ ವರದಿಯಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





