ನೆಲ್ಯಾಡಿ: ಜೇಸಿ ಸಪ್ತಾಹ ‘ಡೈಮಂಡ್-2024’ ಉದ್ಘಾಟನೆ; ಸ್ಥಾಪಕ ಜೇಸಿಗಳಿಗೆ ಗೌರವಾರ್ಪಣೆ

ಶೇರ್ ಮಾಡಿ

ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಆಶ್ರಯದಲ್ಲಿ 41ನೇ ವರ್ಷದ ಜೇಸಿ ಸಪ್ತಾಹ ‘ಡೈಮಂಡ್-2024’ ಇದರ ಉದ್ಘಾಟನೆ ಹಾಗೂ ಸ್ಥಾಪಕ ಜೇಸಿ ಸದಸ್ಯರ ಗುರುತಿಸುವ ಕಾರ್ಯಕ್ರಮ ಸೆ.9ರಂದು ಸಂಜೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್ ಅವರು ಉದ್ಘಾಟಿಸಿ ನೆಲ್ಯಾಡಿ ಪರಿಸರದಲ್ಲಿ ಜೇಸಿಐ ವತಿಯಿಂದ ಅತೀ ಹೆಚ್ಚು ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿದೆ. ಯುವ ಜನತೆ ಜೇಸಿಐಯಲ್ಲಿ ತೊಡಗಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಹೇಳಿದ ಅವರು ಜೇಸಿ ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ ಸಂಸ್ಥೆಯ ಸಭಾಂಗಣ ಬಳಕೆ ಮಾಡಿಕೊಳ್ಳುವಂತೆ ಹೇಳಿದರು.

ಸ್ಥಾಪಕ ಜೇಸಿಗಳಿಗೆ ಗೌರವಾರ್ಪಣೆ ಮಾಡಿದ ಪೂರ್ವ ವಲಯಾಧ್ಯಕ್ಷ ಕೃಷ್ಣಮೋಹನ್ ಪಿ.ಎಸ್.ಅವರು ಮಾತನಾಡಿ ಜೇಸಿ ಆರಂಭಗೊಂಡು 109 ವರ್ಷ ಆಗಿದೆ. ಭಾರತದಲ್ಲಿ ಜೇಸಿ ಆರಂಭಗೊಂಡು 75 ವರ್ಷ ಆಗುತ್ತಿದೆ. ಜೇಸಿ ಸಪ್ತಾಹದ ಮೂಲಕ ಹೊಸ ಸದಸ್ಯರ ಸೇರ್ಪಡೆ ಹಾಗೂ ಊರಿನ ಕುಂದುಕೊರತೆಗೆ ಸ್ಪಂದನೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಇದೊಂದು ಹಿರಿಯರ ಹಾಗೂ ಕಿರಿಯರ ಸಂಪರ್ಕಕ್ಕೂ ವೇದಿಕೆಯಾಗಲಿದೆ ಎಂದರು. ರಾಷ್ಟ್ರೀಯ ಹೆದ್ದಾರಿಯಿಂದ ಆಗುತ್ತಿರುವ ಸಮಸ್ಯೆ ಹಾಗೂ ಶಾಲೆಗಳಿಗೆ ಬೇರೆ ಬೇರೆ ಕಂಪನಿಗಳಿಂದ ಸಿಎಸ್‍ಆರ್ ಫಂಡ್‍ನಿಂದ ಅನುದಾನ ಪಡೆಯಲು ಜೇಸಿ ಸದಸ್ಯರು ಟ್ವೀಟ್ ಅಭಿಯಾನ ನಡೆಸಬೇಕು ಎಂದು ಹೇಳಿದ ಅವರು, ಯುವ ಜನತೆ ಉದ್ಯೋಗಕ್ಕೆ ಸೀಮಿತವಾಗದೇ ಸಂಘಟನೆಗಳಲ್ಲಿ ತೊಡಗಿಕೊಳ್ಳಬೇಕು. ಇದು ರೋಗಗಳಿಗೆ ಮದ್ದು ದೊರೆತಂತೆ. ಈ ವರ್ಷ ವೈಯಕ್ತಿಕ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ, ಅಂತರಾಷ್ಟ್ರೀಯ ಸಹಕಾರ, ವ್ಯವಹಾರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಜೇಸಿಐ ಆಹ್ವಾನಿಸಿದೆ. ಸದಸ್ಯರ ಯೋಜನೆ ಆಯ್ಕೆಗೊಂಡಲ್ಲಿ ವಿದೇಶದಲ್ಲಿ ನಡೆಯುವ ಜೇಸಿಐನ ವಿಶ್ವ ಸಮ್ಮೇಳನಕ್ಕೆ ಆಹ್ವಾನ ಸಿಗಲಿದ್ದು ಮುಂದಿನ ವರ್ಷ ಅದು ಜಾರಿಗೂ ಬರಲಿದೆ. ಈ ಮೂಲಕ ನೆಲ್ಯಾಡಿಯ ಹೆಸರು ವಿಶ್ವಮಟ್ಟಕ್ಕೆ ಬರಬಹುದು ಎಂದು ಹೇಳಿದರು.

ಸ್ಥಾಪಕ ಜೇಸಿ ಸದಸ್ಯರಿಗೆ ಗೌರವಾರ್ಪಣೆ:
ನೆಲ್ಯಾಡಿ ಜೇಸಿಐನ ಸ್ಥಾಪಕ ಸದಸ್ಯರಾದ ಅಬ್ರಹಾಂ ವರ್ಗೀಸ್, ರವೀಂದ್ರ ಟಿ., ವೆಂಕಟ್ರಮಣ ಆರ್, ಚಂದ್ರಶೇಖರ ಬಾಣಜಾಲು ಹಾಗೂ ಡಾ.ಸದಾನಂದ ಕುಂದರ್ ಅವರಿಗೆ ಶಾಲು ಹಾಕಿ, ಹೂ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.

ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ನೆಲ್ಯಾಡಿ ಜೇಸಿಐ ಸ್ಥಾಪಕ ಸದಸ್ಯ ಅಬ್ರಹಾಂ ವರ್ಗೀಸ್ ನೆಲ್ಯಾಡಿ ಜೇಸಿಐ 1983-84ರಲ್ಲಿ ಆರಂಭಗೊಂಡಿದೆ. ಚಂದ್ರಹಾಸ ರೈ ಅವರು ಪ್ರಥಮ ಅಧ್ಯಕ್ಷರಾಗಿದ್ದರು. ಬಳಿಕ ರವೀಂದ್ರ ಟಿ. ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ನೆಲ್ಯಾಡಿ ಜೇಸಿಐಯೂ ರಾಜ್ಯ ಮಟ್ಟದಲ್ಲಿ ಹೆಸರು ಪಡೆದುಕೊಂಡಿದೆ. ನೆಲ್ಯಾಡಿ ಜೇಸಿಐ ರವೀಂದ್ರ ಟಿ.ಅವರು ರಾಜ್ಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಈಗ ನೆಲ್ಯಾಡಿ ಜೇಸಿಐ 41ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಇದು ಇನ್ನಷ್ಟೂ ಬೆಳಗಲಿ ಎಂದು ಹೇಳಿದರು.

ಇನ್ನೋರ್ವ ಸ್ಥಾಪಕ ಸದಸ್ಯ ರವೀಂದ್ರ ಟಿ. ಮಾತನಾಡಿ, ನನ್ನನ್ನು ಜೇಸಿಐಗೆ ಪರಿಚಯಿಸಿದವರು ಅಬ್ರಹಾಂ ವರ್ಗೀಸ್ ಅವರು. ಒಳ್ಳೆಯ ಶಿಕ್ಷಕನಾಗಲು ಜೇಸಿಐಯಿಂದ ದೊರೆತ ಜ್ಞಾನವೇ ಕಾರಣವಾಗಿದೆ. ಜೇಸಿಐಯಿಂದ ಬೆಳೆಯಲು ಸಾಧ್ಯವಾಯಿತು. ರಾಜ್ಯ ಉಪಾಧ್ಯಕ್ಷನಾಗಿದ್ದ ವೇಳೆ ರಾಷ್ಟ್ರಮಟ್ಟದಲ್ಲಿ ರನ್ನರ್ ಆಫ್ ಪ್ರಶಸ್ತಿಯೂ ಒಲಿದುಬಂತು ಎಂದು ನೆನಪಿಸಿಕೊಂಡರು.

ಅತಿಥಿಗಳಾಗಿದ್ದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಂ.ಕೆ.ಎಲಿಯಾಸ್‍ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ನಿಕಟಪೂರ್ವಾಧ್ಯಕ್ಷ ದಯಾಕರ ರೈ, ಮಹಿಳಾ ಜೇಸಿ ಅಧ್ಯಕ್ಷೆ ಲೀಲಾಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಜಾಹ್ನವಿ ವಂದಿಸಿದರು. ಯೋಜನಾ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್ ಅವರು ಜೇಸಿ ಸಪ್ತಾಹ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಪುರಂದರ ಗೌಡ ಡೆಂಜ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೆಜೆಸಿ ಅಧ್ಯಕ್ಷ ಶಮಂತ್ ಜೇಸಿವಾಣಿ ವಾಚಿಸಿದರು.

Leave a Reply

error: Content is protected !!