ವಾಹನ ಚಾಲಕರೇ ಎಚ್ಚರ; ಸಂಚಾರ ನಿಯಮ ಉಲ್ಲಂಫಿಸಿದರೆ ಡಿಎಲ್‌ ಅಮಾನತು!

ಶೇರ್ ಮಾಡಿ

ಸಂಚಾರ ನಿಯಮ ಉಲ್ಲಂಘಿಸುವ ಮೊದಲು ವಾಹನ ಚಾಲಕರು ಸಾಕಷ್ಟು ಚಿಂತಿಸಬೇಕಾಗಿದೆ ಇನ್ನು ಮುಂದೆ . ಸಿಕ್ಕಿಬಿದ್ದರೆ ದಂಡ ಪಾವತಿಸಿ ಸುಮ್ಮನಾಗಬಹುದು ಎಂದು ಭಾವಿಸಿದ್ದರೆ ಆಪಾಯ ಖಚಿತ. ಯಾಕೆಂದರೆ ಪೊಲೀಸರು ಇಂಥವರ ಚಾಲನಾ ಪರವಾನಿಗೆಯನ್ನು ಅಮಾನತು ಮಾಡುವ ಕ್ರಮಕ್ಕೆ ಮುಂದಾಗಿದ್ದಾರೆ!

ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಡಿಎಲ್‌ ಅಮಾನತು ಅಸ್ತ್ರವನ್ನು ಹೆಚ್ಚಾಗಿ ಪ್ರಯೋಗಿಸಲು ಮುಂದಾಗಿದ್ದಾರೆ. ದ.ಕ. ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಪೊಲೀಸರು ಕೂಡ ಡಿಎಲ್‌ ಅಮಾನತುಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಒಂದು ವರ್ಷದಲ್ಲಿ ಸಾವಿರಕ್ಕೂ ಅಧಿಕ ಡಿಎಲ್‌ಗ‌ಳನ್ನು ಅಮಾನತು ಮಾಡಲಾಗಿದೆ.

ಯಾವ ಪ್ರಕರಣಗಳಲ್ಲಿ ಅಮಾನತು?:
ಯಾವುದೇ ರೀತಿಯ ವಾಹನ ಸಂಚಾರ ನಿಯಮ ಉಲ್ಲಂಘನೆಯಾದರೂ ಡಿಎಲ್‌ ಅಮಾನತಿಗೆ ಪೊಲೀಸರು ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಶಿಫಾರಸು ಮಾಡಬಹುದಾಗಿದೆ. ದ.ಕ. ಜಿಲ್ಲಾ ಪೊಲೀಸ್‌, ಮಂಗಳೂರು ಪೊಲೀಸ್‌ ಕಮಿಷನರೆಟ್‌ ಹಾಗೂ ಉಡುಪಿ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಹೆಚ್ಚಾಗಿ ಮದ್ಯ ಸೇವಿಸಿ ವಾಹನ ಚಾಲನೆ, ಅಪಘಾತದಿಂದ ಸಾವು ಸಂಭವಿಸುವಂಥ ಗಂಭೀರ ಪ್ರಕರಣಗಳು, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ, ಏಕಮುಖೀ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು, ಪದೇಪದೆ ಸಂಚಾರ ನಿಯಮ ಉಲ್ಲಂ ಸುವುದು ಮುಂತಾದ ಪ್ರಕರಣಗಳಲ್ಲಿ ಡಿಎಲ್‌ ಅಮಾನತು ಮಾಡಲಾಗುತ್ತಿದೆ.

ಅಮಾನತು ಅವಧಿ :
ಅಮಾನತು ಅವಧಿ ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿದೆ. ಕನಿಷ್ಠ 1ರಿಂದ 6 ತಿಂಗಳ ಅವಧಿ ಇರುತ್ತದೆ. ಸಾವು ಸಂಭವಿಸುವಂಥ ಪ್ರಕರಣಗಳಲ್ಲಿ 6 ತಿಂಗಳವರೆಗೂ ಡಿಎಲ್‌ ಅಮಾನತು ಮಾಡಲಾಗುತ್ತಿದೆ. ಪೊಲೀಸರು ನೀಡುವ ಶಿಫಾರಸಿನ ಬಳಿಕ ಆರ್‌ಟಿಒ ಅಧಿಕಾರಿಗಳು ನೋಟಿಸ್‌ ಪ್ರಕ್ರಿಯೆ ನಡೆಸಿ ಅಮಾನತುಗೊಳಿಸುತ್ತಾರೆ.

ಎಲ್ಲಿ, ಎಷ್ಟು?
ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2023ರಲ್ಲಿ 1,400 ಮತ್ತು 2024ರ ಆಗಸ್ಟ್‌ ವರೆಗೆ 900 ಡಿಎಲ್‌ಗ‌ಳ ಅಮಾನತಿಗೆ ಪೊಲೀಸರು ಆರ್‌ಟಿಒಗೆ ಶಿಫಾರಸು ಮಾಡಿದ್ದಾರೆ. ಇದರಲ್ಲಿ 1,200 ಮಂದಿ ದ್ವಿಚಕ್ರ ವಾಹನ ಸವಾರರು. ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 2023ರಲ್ಲಿ 285 ಹಾಗೂ 2024ರ ಆಗಸ್ಟ್‌ ವರೆಗೆ 197 ಚಾಲನಾ ಪರವಾನಿಗೆಗಳ ರದ್ದತಿಗೆ ಆರ್‌ಟಿಒಗೆ ಶಿಫಾರಸು ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ 2023ರಲ್ಲಿ ಪೊಲೀಸರು 188 ಡಿಎಲ್‌ಗ‌ಳ ಅಮಾನತಿಗೆ ಶಿಫಾರಸು ಮಾಡಿದ್ದು, ಅದರಲ್ಲಿ ಎಲ್ಲವೂ ಅಮಾನತಾಗಿದೆ. 2024ರ ಜೂನ್‌ ವರೆಗೆ 92 ಶಿಫಾರಸು ಮಾಡಿದ್ದು, ಈ ಪೈಕಿ 89 ಅಮಾನತಾಗಿದೆ. ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ 456 ಡಿಎಲ್‌ಗ‌ಳು, 2022-23ನೇ ಸಾಲಿನಲ್ಲಿ 225 ಡಿಎಲ್‌ಗ‌ಳು, 2023-24ರಲ್ಲಿ 90 ಸಹಿತ ಒಟ್ಟು 771 ಡ್ರೈವಿಂಗ್‌ ಲೈಸನ್ಸ್‌ ಅಮಾನತು ಮಾಡಲಾಗಿದೆ. ಮದ್ಯ ಸೇವಿಸಿ ವಾಹನ ಚಲಾಯಿಸಿದ 62 ಮಂದಿಯ ಡ್ರೈವಿಂಗ್‌ ಲೈಸನ್ಸ್‌ ರದ್ದು ಮಾಡಲಾಗಿದೆ. ಶಿಫಾರಸು ಆಗಿರುವ ವರದಿಗಳಲ್ಲಿ ಇನ್ನೂ 1,150 ಪರವಾನಿಗೆಗಳ ಅಮಾನತು ಪ್ರಕ್ರಿಯೆ ಜಾರಿಯಲ್ಲಿದೆ. ಪುತ್ತೂರು ಆರ್‌ಟಿಒ ವ್ಯಾಪ್ತಿಯಲ್ಲಿ 2023-24ರಲ್ಲಿ 127, ಈ ಸಾಲಿನಲ್ಲಿ ಆಗಸ್ಟ್‌ ವರೆಗೆ 50 ಡಿಎಲ್‌ಗ‌ಳನ್ನು ಅಮಾನತು ಮಾಡಲಾಗಿದ್ದು, ಪೊಲೀಸರಿಂದ ಶಿಫಾರಸು ಆಗಿರುವ ಡಿಎಲ್‌ಗ‌ಳ ಪೈಕಿ ಇನ್ನೂ ಸುಮಾರು 110ರಷ್ಟು ಅಮಾನತು ಬಾಕಿ ಇದೆ. ಬಂಟ್ವಾಳದಲ್ಲಿ 2023-24ರಲ್ಲಿ 125 ಹಾಗೂ 24-25ನೇ ಸಾಲಿನಲ್ಲಿ ಆಗಸ್ಟ್‌ ವರೆಗೆ 53 ಲೈಸನ್ಸ್‌ ಅಮಾನತುಗೊಳಿಸಲಾಗಿದೆ.

Leave a Reply

error: Content is protected !!