
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್ ನಿಂದ ಅಡ್ಡಹೊಳೆಯವರೆಗೆ ಚತುಷ್ಪದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆಯ ಸಮಸ್ಯೆಗಳ ಬಗ್ಗೆ ವಿಶೇಷ ವರದಿ ಪ್ರಕಟಗೊಂಡಿತ್ತು, ಈ ಹಿನ್ನಲೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಂಗಳವಾರ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪೆರಿಯಶಾಂತಿಯಿಂದ ಅಡ್ಡಹೊಳೆಯವರೆಗೆ ನಡೆಯುವ ಕಾಮಗಾರಿಯ ವೀಕ್ಷಣೆಗೆ ಭೇಟಿ ನೀಡಿದರು.

ಪೆರಿಯಶಾಂತಿಯ ಬಳಿ ಭೇಟಿ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು. ಕಾಮಗಾರಿ ನಿರ್ವಹಿಸುತ್ತಿರುವ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಲಾಖೆಯ ಇಂಜೀನಿಯರ್‌ಗಳನ್ನು ಸ್ಥಳಕ್ಕೆ ಕರೆಸಿದ ಶಾಸಕರು ಅವರಿಂದ ಮಾಹಿತಿ ಪಡೆದು ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕಾಮಗಾರಿ ನಿರ್ವಹಿಸುವಂತೆ ಸೂಚಿಸಿ, ಪೆರಿಯಶಾಂತಿಯ ಬಳಿ ಇರುವ ಅಂಡರ್ ಪಾಸ್ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು ಸಮರ್ಪಕವಾಗಿ ನೀರು ಹರಿದುಹೋಗುವಂತೆ, ಮಾರ್ಗಸೂಚಿ ನಾಮಫಲಕಗಳನ್ನು ದೊಡ್ಡದಾಗಿ ಅಳವಡಿಸುವಂತೆ. ಕಾಮಗಾರಿಯ ವೇಗವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿದರು. ಬಳಿಕ ಶಾಸಕರು ಅಡ್ಡಹೊಳೆ ಭಾಗದಲ್ಲಿ ಕಾಮಗಾರಿ ವೀಕ್ಷಣೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶರಾದ ಅಬ್ದುಲ್ ಜಾವೇದ್ ಅಜ್ಮೀ, ಇಂಜಿನಿಯರ್ ಗಳಾದ ನವೀನ್, ಶ್ರೀನಿವಾಸ್, ಜಗನ್‌ಮೋಹನ್, ವಿನೋದ್, ವಿವೇಕಾನಂದ, ಇಂಜಿನಿಯರ್ ಸಾಯಿ ರಾಮ್ ಮೊದಲಾದವರು ಕಾಮಗಾರಿ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಕಡಬ, ಪ್ರಮುಖರಾದ ಭಾಸ್ಕರ ಗೌಡ ಇಚ್ಲಂಪಾಡಿ, ಬಾಲಕೃಷ್ಣ ಬಾಣಜಾಲು, ರವಿಪ್ರಸಾದ್ ಶೆಟ್ಟಿ, ಪ್ರಸಾದ್ ಕಾಟೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





