ಧರ್ಮಸ್ಥಳ: ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರೇರಕವಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದರು.
ಶನಿವಾರ ಧರ್ಮಸ್ಥಳಕ್ಕೆ ಆಗಮಿಸಿದ ಕನ್ನಡ ಭುವನೇಶ್ವರಿ ರಥಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಿದ ಹೆಗ್ಗಡೆಯವರು ಗ್ರಾಮೀಣ ಪ್ರದೇಶವಾದ ಧರ್ಮಸ್ಥಳದಲ್ಲಿ ಅಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಡಾ. ಹಂಪನಾ ನೇತೃತ್ವದಲ್ಲಿ 51ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿರುವುದನ್ನು ಧನ್ಯತೆಯಿಂದ ಸ್ಮರಿಸಿದರು.
ಕನ್ನಡ ಭುವನೇಶ್ವರಿ ರಥಯಾತ್ರೆ ಸುಗಮವಾಗಲಿ ಎಂದು ಹಾರೈಸಿದ ಹೆಗ್ಗಡೆಯವರು, ಕನ್ನಡ ಸಾಹಿತ್ಯ ಸಮ್ಮೇಳನವು ನಾಡು, ನುಡಿ ಮತ್ತು ಸಂಸ್ಕೃತಿ ಬಗ್ಯೆ ಅಭಿಮಾನ, ಅರಿವು ಹಾಗೂ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಡಿ. ಹರ್ಷೇಂದ್ರ ಕುಮಾರ್, ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ದೇವಳ ಪಾರುಪತ್ಯಗಾರರಾದ ಲಕ್ಷಿ ನಾನಾರಾಯಣ ರಾವ್, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿತರಿದ್ದರು.