ನೆಲ್ಯಾಡಿ: ದಾರಿ ವಿವಾದಕ್ಕೆ ಸಂಬಂಧಿಸಿ ಪ್ರಗತಿಪರ ಕೃಷಿಕರೋರ್ವರನ್ನು ಅವರ ಸಂಬಂಧಿಕನೇ ರಾತ್ರಿ ಹೊತ್ತು ಕಾದು ಕುಳಿತು ಅಟ್ಟಾಡಿಸಿ ಕತ್ತಿಯಿಂದ ಕೊಲೆ ನಡೆಸಿದ ಬೀಭತ್ಸ್ಯ ಘಟನೆ ನ.8ರಂದು ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹರೀಶ್ ಎಂಬಾತನನ್ನು ಶುಕ್ರವಾರದಂದು ತಡರಾತ್ರಿ ಗೋಳಿತ್ತೋಟ್ಟು ಸಮೀಪದ ಸಣ್ಣಂಪಾಡಿ ಎಂಬಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕಡಬ ತಾಲೂಕಿನ ಆಲಂತಾಯ ಗ್ರಾಮದ ಪೆರ್ಲ ನಿವಾಸಿ ವೆಂಕಪ್ಪ ಗೌಡ ಮತ್ತು ದೇಜಮ್ಮ ದಂಪತಿಯ ಪುತ್ರ ರಮೇಶ ಗೌಡ(49) ಕೊಲೆಯಾದ ವ್ಯಕ್ತಿ. ಇವರ ಸಂಬಂಧಿಕನೇ ಆಗಿರುವ ಪೆರ್ಲದ ಕಲ್ಲಂಡದ ಹರೀಶ, ಸಂತೋಷ್, ಧರ್ಣಪ್ಪ ಯಾನೆ ಬೆಳ್ಳಿಯಪ್ಪ ಸೇರಿ ಕೃತ್ಯ ಎಸಗಿ ಆರೋಪಿಗಳು ಪರಾರಿಯಾಗಿದ್ದರು.
ಘಟನೆಯ ವಿವರ:
ರಮೇಶ ಗೌಡರ ಮತ್ತು ಆರೋಪಿ ಹರೀಶ್ ನ ಮನೆಯವರಿಗೂ ಸುಮಾರು 7-8 ತಿಂಗಳ ಹಿಂದೆ ರಸ್ತೆಗೆ ನೀರಿನ ಪೈಪ್ ಅಳವಡಿಸಿದ ಬಗ್ಗೆ ಬಾಯಿ ಮಾತಿನಲ್ಲಿ ಗಲಾಟೆಯಾಗಿದ್ದು ಈ ಬಗ್ಗೆ ರಮೇಶ್ ಅವರ ತಂದೆ ವೆಂಕಪ್ಪ ಗೌಡ ಅವರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು. ಎರಡು ತಿಂಗಳ ಹಿಂದೆ ರಮೇಶ್ ಗೌಡ ರ ಜಾಗದಲ್ಲಿದ್ದ ಆಕೇಶಿಯ ಮರವೊಂದು ಮಳೆಗೆ ಹರೀಶ್ ಅವರ ರಬ್ಬರ್ ತೋಟಕ್ಕೆ ಬಿದ್ದಿದ್ದು, ನ.8ರಂದು ಮಧ್ಯಾಹ್ನ 1.30ಕ್ಕೆ ಹರೀಶ್ ಅವರು ಮರವನ್ನು ಕಡಿಯುತ್ತಿದ್ದಾಗ ರಮೇಶ್ ಗೌಡ ಅವರು ಮರ ಕಡಿಯುವ ಸ್ಥಳಕ್ಕೆ ತೆರಳಿ ಮರ ಕಡಿಯುವುದು ಬೇಡ ಎಂದು ಹೇಳಿದಾಗ ಹರೀಶ್ ಎಂಬುವರು ರಮೇಶ್ ಅವರಿಗೆ ಬೈದಿದ್ದು ಇಬ್ಬರ ನಡುವೆ ಗಲಾಟೆ ನಡೆದಿತ್ತು.
ನ.8ರ ರಾತ್ರಿ ಏಳರ ಸುಮಾರಿಗೆ ರಮೇಶ ಗೌಡರು ಪೆರ್ಲ ದೇವಸ್ಥಾನದಲ್ಲಿ ನಡೆಯುವ ವಾರದ ಭಜನೆಗೆ ತನ್ನ ಬೈಕ್‌ನಲ್ಲಿ ತೆರಳಿದ್ದು, ತನ್ನ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ದೇವಸ್ಥಾನಕ್ಕೆ ತಿರುಗುವ ಜಾಗದಲ್ಲಿ ಆರೋಪಿ ಹರೀಶ ಮತ್ತಿಬ್ಬರು ಕಾದು ಕುಳಿತಿದ್ದು, ಇವರ ಬೈಕ್‌ಗೆ ಅಡ್ಡ ಹೋಗಿ ರಮೇಶ್ ಗೌಡ ಅವರಿಗೆ ಕತ್ತಿಯಿಂದ ಕಡಿದಿದ್ದಾರೆ. ಈ ಸಂದರ್ಭ ಬೈಕ್ ಪಲ್ಟಿಯಾಗಿದ್ದು, ಜೀವರಕ್ಷಣೆಗೆಂದು ಮತ್ತೊಂದು ದಾರಿಯಲ್ಲಿ ರಮೇಶ್ ಅವರು ಓಡಿ ಹೋಗಿದ್ದಾರೆ. ಆಗ ಬೆನ್ನಟ್ಟಿದ ಆರೋಪಿಯು ರಮೇಶ ಗೌಡರನ್ನು ಭೀಭತ್ಸ್ಯವಾಗಿ ಕತ್ತಿಯಿಂದ ಕಡಿದು ಕೊಲೆ ನಡೆಸಿ, ಪರಾರಿಯಾಗಿದ್ದಾರೆ. ರಮೇಶ್ ಗೌಡ ಅವರ ಬೊಬ್ಬೆ ಕೇಳಿ ಅವರ ಪತ್ನಿ ಸ್ಥಳಕ್ಕೆ ಓಡಿ ಬಂದರಾದರೂ ಆ ವೇಳೆಗೆ ಕತ್ತಿಯಿಂದ ಕಡಿದ ಪರಿಣಾಮ ಮುಖದಲ್ಲಿ, ಬಾಯಲ್ಲಿ ಎರಡು ಕೈಗಳಲಲ್ಲಿ, ಬಲ ತೋಳಿನಲ್ಲಿ ಮತ್ತು ಮೈಯಲ್ಲಿ ಅಲ್ಲಲ್ಲಿ ಗಾಯವಾಗಿ ರಕ್ತ ಹರಿದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೃತ ರಮೇಶ್ ಗೌಡ ಅವರ ಪತ್ನಿ ಗೀತಾ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಎಸ್ಪಿ ಆಗಮನ:
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧಿಕ್ಷಕ ಯತೀಶ್ ಎನ್, ಪುತ್ತೂರು ಡಿವೈ ಎಸ್ಪಿ ಅರುಣ್ ನಾಗೇಗೌಡ, ವೃತ್ತ ನಿರೀಕ್ಷಕ ರವಿ ಬಿ.ಎಸ್, ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಅವಿನಾಶ್ ಗೌಡ, ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿದ್ದು, ಮಹಜರು ಪ್ರಕ್ರಿಯೇ ನಡೆಸಿದರು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ರಮೇಶ್ ಗೌಡ ಅವರು, ಸಜ್ಜನ ವ್ಯಕ್ತಿಯಾಗಿದ್ದು, ಉತ್ತಮ ಭಜನಾ ಸಂಘಟಕರಾಗಿದ್ದರು. ಗೋಳಿತೊಟ್ಟು ವಲಯ ಭಜನಾ ಪರಷತ್ ಅಧ್ಯಕ್ಷರಾಗಿ, ಆಲಂತಾಯ ಪೆರ್ಲ ಶ್ರೀ ಷಣ್ಮುಖ ಭಜನಾ ಮಂಡಳಿ ಅಧ್ಯಕ್ಷರಾಗಿ, ಒಕ್ಕಲಿಗ ಗೌಡ ಸೇವಾ ಸಂಘದ ಆಲಂತಾಯ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರಲ್ಲದೆ, ಪೆರ್ಲ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು. ಮೃತರು ತಂದೆ ವೆಂಕಪ್ಪ ಗೌಡ, ತಾಯಿ ದೇಜಮ್ಮ, ಪತ್ನಿ ಗೀತಾ, ಓರ್ವ ಪುತ್ರಿ ಹಾಗೂ ಓರ್ವ ಪುತ್ರ, ಸಹೋದರಿಯೋರ್ವರನ್ನು ಅಗಲಿದ್ದಾರೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಸಂಜೀವ ಮಠದೂರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಆಶಾ ತಿಮ್ಮಪ್ಪ, ಮಾಜಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿಪ್ರಸಾದ್ ಶೆಟ್ಟಿ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಭಾಸ್ಕರಗೌಡ.ಎಸ್ ಇಚ್ಲಂಪಾಡಿ ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.