ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪ್ರಯುಕ್ತ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಗೆ ಭಕ್ತರು ಸಾಮೂಹಿಕವಾಗಿ ನಡೆಸುತ್ತಿರುವ ಭಕ್ತಿ ಭಜನೆಯ 12ನೇ ವರ್ಷದ ಪಾದಯಾತ್ರೆಗೆ ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು.
ಹಲವು ಸಹಸ್ರಾರು ಮಂದಿ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಪಾದಯಾತ್ರೆಯುದ್ದಕ್ಕೂ ಓಂ ನಮಃ ಶಿವಾಯ ಹರ ಹರ ಮಹಾದೇವ ಭಕ್ತಿ ಘೋಷಣೆ ಹಾಗೂ ಭಜನೆ ನಡೆಯಿತು.
ಶ್ರೀ ಜನಾರ್ದನ ದೇವರ ದರ್ಶನ ಮಾಡಿ ಪಾದಯಾತ್ರೆಯಲ್ಲಿ ಬಂದರು ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಹಲವಾರು ಭಜನಾ ತಂಡಗಳ ಸದಸ್ಯರು ಭಜನೆ ಹೇಳುತ್ತಾ ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಸ್ಥಳೀಯರು ನೀರು ಬೆಲ್ಲ,ಪಾನಕ, ಮಜ್ಜಿಗೆ ಇತ್ಯಾದಿ ವ್ಯವಸ್ಥೆ ಮಾಡಿದ್ದರು. ರಸ್ತೆಯ ಒಂದು ಬದಿಯಲ್ಲಿ ಪಾದಯಾತ್ರೆ ಸಾಗಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗದಂತೆ ಸ್ವಯಂಸೇವಕರು ಕ್ರಮಕೈಗೊಂಡರು.
ಉಜಿರೆಯಲ್ಲಿ ಫಲಾಹಾರ, ಕುಡಿಯುವ ನೀರಿನ ವ್ಯವಸ್ಥೆ, ಶಾರದಾ ಮಂಟಪ, ಕೃಷ್ಣುಗ್ರಹ ಸಭಾಭವನ ಹಾಗು ರಥಬೀದಿಯಲ್ಲಿ ಪಾದಯತ್ರಿಗಳಿಗೆ ವಿಶ್ರಾಂತಿ ವ್ಯವಸ್ಥೆಯನ್ನು ಪಾದಯಾತ್ರೆ ಸಮಿತಿ ವತಿಯಿಂದ ಮಾಡಲಾಗಿತ್ತು. ಉಜಿರೆ ಸರ್ಕಲ್ ನಲ್ಲಿ ಕುಣಿತ ಭಜನೆ ಹಾಗು ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು.
ಶಾಸಕ ಹರೀಶ್ ಪೂಂಜ, ಎಂ ಎಲ್ ಸಿ ಪ್ರತಾಪ್ ಸಿಂಹ ನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಮಾಜಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ವಸಂತ ಸಾಲ್ಯಾನ್, ಎಸ್ ಕೆ ಡಿ ಆರ್ ಡಿ ಪಿಯ ನಿವೃತ್ತ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್.ಎಸ್.ಎಸ್., ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್, ರಾಜೇಶ್.ಪೈ, ಎಸ್ ಡಿ ಎಂ ಕಾಲೇಜಿನ ಪ್ರಿನ್ಸಿಪಾಲ್ ಡಾ.ಬಿ.ಎ.ಕುಮಾರ್ ಹೆಗ್ಡೆ, ಕಲಾನಿಕಾಯದ ಡೀನ್ ಡಾ.ಶ್ರೀಧರ್ ಭಟ್, ತಾಲೂಕಿನ ವರ್ತಕರು, ಭಕ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.