ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿರುವ ಪೋಷಕರು || ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿರುವ ಮಕ್ಕಳು
ನೆಲ್ಯಾಡಿ: ಕಳೆದ ಮೂರು ನಾಲ್ಕು ವರ್ಷಗಳಿಂದ ಅಡ್ಡಹೊಳೆಯಿಂದ ಬಿಸಿರೋಡಿನವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪದ ಕಾಮಗಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜಾಣ ನಿರ್ಲಕ್ಷ ಹಾಗೂ ಉಡಾಫೆಯಿಂದಾಗಿ ಒಂದಲ್ಲ ಒಂದು ಅವಾಂತರಗಳಿಗೆ ಸಾಕ್ಷಿಯಾಗುತ್ತಿದೆ.
ಒಟ್ಟು 64 ಕಿ.ಮೀ. ಉದ್ದದ ಬಿಸಿ ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು 2 ಕಂಪೆನಿಗಳಿಗೆ ಟೆಂಡರ್ ವಹಿಸಲಾಗಿದ್ದು, ಅಡ್ಡಹೊಳೆ- ಪೆರಿಯಶಾಂತಿ ಭಾಗದ 15 ಕಿ.ಮೀ. ಕಾಮಗಾರಿಯನ್ನು 317 ಕೋ.ರೂ.ಗಳಲ್ಲಿ ಪುಣೆ ಮೂಲದ ಎಸ್.ಎಂ. ಔತಾಡೆ ಪ್ರೈ ಲಿ.ಕಂಪೆನಿ ನಿರ್ವಹಿಸುತ್ತಿದ್ದು, ಪೆರಿಯಶಾಂತಿ-ಬಿ.ಸಿ.ರೋಡು ಭಾಗದ 49 ಕಿ.ಮೀ.ಹೆದ್ದಾರಿ ಕಾಮಗಾರಿಯನ್ನು 1,600 ಕೋ.ರೂ.ಗಳಲ್ಲಿ ಹೈದರಾಬಾದ್ ಮೂಲದ ಕೆಎನ್‌ಆರ್ ಸಂಸ್ಥೆ ನಿರ್ವಹಿಸುತ್ತಿದೆ.
ಮಂದಗತಿಯಲ್ಲಿ ಅಪಘಾತ ಸಾವು,ನೋವು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಅರ್ಧಂಬರ್ಧ ಕಾಮಗಾರಿಯನ್ನು ನಡೆಸುತ್ತಿದ್ದು ಅಲ್ಲಲ್ಲಿ ಸಾರ್ವಜನಿಕರು ಅನೇಕ ಬಾರಿ ಆಕೋಶವನ್ನು ಹೊರಹಾಕಿದ ಘಟನೆಯು ನಡೆದಿದೆ. ಇದೀಗ ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿರುವ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಚತುಷ್ಪದ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ಎದ್ದು ಬರುವ ಧೂಳು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಹಾಗೂ ಆರೋಗ್ಯಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ.
ಧೂಳಿನಿಂದಾಗಿ ಆರೋಗ್ಯ ಕೆಟ್ಟರೆ, ಈಗಾಗಲೇ ಕೆಟ್ಟ ಆರೋಗ್ಯ ಮತ್ತಷ್ಟು ಹದಗೆಟ್ಟರೆ ರಾ. ಹೆದ್ದಾರಿ ಇಲಾಖೆಯಾಗಲಿ, ಗುತ್ತಿಗೆದಾರರಾಗಲಿ ಪರಿಹಾರವನ್ನಂತೂ ಕೊಡುವುದಿಲ್ಲ. ನಮ್ಮ ಜಾಗ್ರತೆ ನಾವು ಮಾಡಬೇಕು ಇದರಿಂದಾಗಿ ಬೇರೆ ಶಾಲೆಗೆ ಮಕ್ಕಳನ್ನು ಕಳಿಸುವ ಅನಿವಾರ್ಯತೆ ನಮಗೆ ಈಗ ಬಂದಿದೆ.
- ವಿನೋದ್ ಕುಮಾರ್, ಅಂಗನವಾಡಿ ಮಗುವಿನ ಪೋಷಕರು
ರಸ್ತೆ ಕಾಮಗಾರಿಯಿಂದಾಗಿ ಮಕ್ಕಳ ಹಾಜರಾತಿ ದಿನದಿಂದ ದಿನ ಕಡಿಮೆಯಾಗುತ್ತಿದ್ದು, ಆರೋಗ್ಯದ ಸಮಸ್ಯೆಯು ಹೆಚ್ಚಾಗುತ್ತಿದೆ. ಅಧಿಕಾರಿ ವರ್ಗದವರು ಯಾವುದೇ ರೀತಿ ಸ್ಪಂದನೆ ನೀಡುತ್ತಿಲ್ಲ. ಒಂದು ವಾರದ ಒಳಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸದೆ ಪೋಷಕರು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತೇವೆ.
- ಕೆ.ಇ.ಅಬೂಬಕ್ಕರ್, ನಿಕಟಪೂರ್ವ ಅಧ್ಯಕ್ಷರು ಶಿಕ್ಷಕ-ರಕ್ಷಕ ಸಂಘ ಹೊಸಮಜಲು
ಶಾಲೆಗೆ ಸರಿಯಾದ ಮಾರ್ಗ ಇಲ್ಲದೆ, ಬಿಸಿ ಊಟಕ್ಕೆ ಬೇಕಾಗುವ ವಸ್ತುಗಳನ್ನು ತರಲು ಕಷ್ಟವಾಗುತ್ತಿದೆ, ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಶಾಲೆಯ ಮುಂಭಾಗದಲ್ಲಿ ದೊಡ್ಡದಾದ ಹೊಂಡಗಳು ನಿರ್ಮಾಣವಾಗಿದ್ದು ಪುಟ್ಟ ಮಕ್ಕಳು ಇದೇ ದಾರಿಯಲ್ಲಿ ಶಾಲೆಗೆ ಬರುವುದರಿಂದ ತುಂಬಾ ಅಪಾಯ ಸ್ಥಿತಿ ಉಂಟಾಗಿದೆ, ಇದಕ್ಕೆ ಆದಷ್ಟು ಬೇಗ ಗುತ್ತಿಗೆ ವಹಿಸಿದವರು ತಡೆಗೋಡೆಯನ್ನು ನಿರ್ಮಿಸುವುದು ಅಗತ್ಯವಾಗಿದೆ.
- ದೇವದಾಸ್, ಸಮಾಜ ಸೇವಕರು ಹೊಸಮಜಲು